ರಾಮಾಯಣ
From Wikipedia
ರಾಮಾಯಣ ಹಿಂದೂಗಳ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಎಂಬ ಋಷಿಯಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯ ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು.
ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ ೫ನೇ ಶತಮಾನದಿಂದ ಕ್ರಿ.ಪೂ ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಆದರೆ ಬೇರೆ ಪೌರಾಣಿಕಗಳಂತೆ ಈ ಕಾವ್ಯವೂ ಅನೇಕ ಮಾರ್ಪಾಡುಗಳಿಗೆ ಒಳಗಾಗಿರುವುದರಿಂದ ಇದರ ನಿಖರವಾದ ಕಾಲ ಊಹಿಸುವುದು ಕಷ್ಟವಾಗಿದೆ.
ರಾಮಾಯಣವು ನಂತರದ ಸಂಸ್ಕೃತ ಕಾವ್ಯದ ಮೇಲೆ ಶ್ಲೋಕದ ಹೊಸ ಛಂದಸ್ಸಿನಿಂದಾಗಿ ಬಹುಮುಖ್ಯ ಪ್ರಭಾವ ಬೀರಿದೆ. ಇದು ಪುರಾತನ ಹಿಂದೂ ಋಷಿಗಳ ಬೋಧನೆಗಳನ್ನು ಕಥಾಮಾಧ್ಯಮದ ಮೂಲಕ, ಹಾಗೂ ತಾತ್ವಿಕ ಮತ್ತು ಭಕ್ತಿಸಂಬಂಧಿತ ಚರ್ಚಾಭಾಗಗಳ ಮೂಲಕ ಒಳಗೊಂಡಿದೆ. ರಾಮ , ಸೀತೆ , ಲಕ್ಷ್ಮಣ , ಭರತ , ಹನುಮಂತ ಮತ್ತು ಕಥೆಯ ಖಳನಾಯಕನಾದ ರಾವಣ ಈ ಎಲ್ಲ ಪಾತ್ರಗಳು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ.
ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಪೂರ್ತಿಯಾಯಿತು. ಪ್ರಭಾವಗೊಂಡ ಪ್ರಮುಖರೆಂದರೆ, ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು(ಶ್ರೀ ರಾಮಾಯಣದರ್ಶನಂ).
ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ಎಂಟನೆ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ದಕ್ಷಿಣಪೂರ್ವ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಈ ಪ್ರದೇಶದಲ್ಲಿ ಖ್ಮೇರ್, ಮಜಪಾಹಿತ್, ಶೈಲೇಂದ್ರ, ಚಂಪಾ, ಶ್ರೀವಿಜಯ ಮೊದಲಾದ ಕೆಲವು ಮುಖ್ಯ ಭಾರತೀಯ ಸಾಮ್ರಾಜ್ಯಗಳು ಸ್ಥಾಪಿಸಲ್ಪಟ್ಟವು. ಇವುಗಳ ಮೂಲಕ ರಾಮಾಯಣ ಇಂಡೊನೇಷ್ಯಾ (ಜಾವಾ, ಸುಮಾತ್ರಾ ಮತ್ತು ಬೋರ್ನಿಯೊ), ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಯಿತು.
ಪರಿವಿಡಿ |
[ಬದಲಾಯಿಸಿ] ರಾಮಾಯಣದ ರಚನೆ
ರಾಮಾಯಣಗಳಲ್ಲೆಲ್ಲ ಹಳೆಯದೂ ಹೆಚ್ಚು ಜನರು ಓದುವಂಥದೂ ಆದ ವಾಲ್ಮೀಕಿಯ 'ರಾಮಾಯಣ'ವು ಅನೇಕ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿರುವ ಅನೇಕ ರಾಮಾಯಣದ ಆವೃತ್ತಿಗಳಿಗೆ ಆಧಾರವಾಗಿದೆ. ಈ ಕೃತಿಯು ಅನೇಕ ಪೂರ್ಣ ಮತ್ತು ಅಪೂರ್ಣ ಹಸ್ತಪ್ರತಿಗಳಲ್ಲಿ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ಅತ್ಯಂತ ಹಳೆಯದು ೧೧ನೆಯ ಶತಮಾನದ್ದು. [೧] ವಾಲ್ಮೀಕಿ ರಾಮಾಯಣದ ಪ್ರಸ್ತುತ ಪ್ರತಿಯು ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಎರಡು ಪ್ರಾದೇಶಿಕ ಆವೃತ್ತಿಗಳ ರೂಪದಲ್ಲಿ ನಮಗೆ ಲಭ್ಯವಾಗಿದೆ . ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳು ಕಾಂಡಗಳಾಗಿ ವಿಭಜಿಸಲಾಗುತ್ತದೆ .
- ಬಾಲ ಕಾಂಡ – ರಾಮನ ಜನನ, ಬಾಲ್ಯ, ವನವಾಸಕ್ಕೆ ಹೋಗುವ ಮುನ್ನ ಅಯೋಧ್ಯೆಯಲ್ಲಿ ರಾಮ ಕಳೆದ ದಿನಗಳು, ವಿಶ್ವಾಮಿತ್ರನ ಕೋರಿಕೆಯಂತೆ ರಾಕ್ಷಸರನ್ನು ಸಂಹರಿಸಲು ಅವನೊಡನೆ ಅರಣ್ಯಕ್ಕೆ ತೆರಳುವುದು, ಸೀತಾ ಸ್ವಯಂವರ- ಈ ಘಟನೆಗಳನ್ನು ಬಾಲಕಾಂಡ ಒಳಗೊಂಡಿದೆ.
- ಅಯೋಧ್ಯಾ ಕಾಂಡ – ಈ ಭಾಗದಲ್ಲಿ ಕೈಕೇಯಿಯು ದಶರಥನಲ್ಲಿ ಕೇಳಿಕೊಂಡಿದ್ದ ಮೂರು ವರಗಳಿಂದ ರಾಮನಿಗೆ ವನವಾಸವಾಗುತ್ತದೆ. ದಶರಥನು ಪುತ್ರಶೋಕವನ್ನು ತಾಳಲಾರದೆ ಮರಣಹೊಂದುತ್ತಾನೆ.
- ಅರಣ್ಯ ಕಾಂಡ – ವನವಾಸದಲ್ಲಿ ರಾಮನ ಜೀವನ, ಸೀತೆಯ ಅಪಹರಣ ಈ ಭಾಗದಲ್ಲಿ ಚಿತ್ರಿತವಾಗಿದೆ.
- ಕಿಷ್ಕಿಂಧಾ ಕಾಂಡ – ಸೀತೆಯನ್ನು ಅರಸುತ್ತಾ ರಾಮ ಕಿಷ್ಕಿಂದೆಯಲ್ಲಿ ಎಂಬ ವಾನರ ಸಾಮ್ರಾಜ್ಯಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಸುಗ್ರೀವ, ಹನುಮಂತ ಮುಂತಾದ ಕಪಿವೀರರ ಗೆಳೆತನವಾಗುತ್ತದೆ. ವಾನರಸೈನ್ಯವು ಸೀತೆಯನ್ನು ಹುಡುಕಲು ಪ್ರಾರಂಭಿಸುತ್ತದೆ.
- ಸುಂದರ ಕಾಂಡ – ಹನುಮಂತನ ಬಗೆಗಿನ ವಿವರಗಳಿವೆ. ಹನುಮಂತನ ಇನ್ನೊಂದು ಹೆಸರು ಸುಂದರೆ ಎಂದಿರುವುದರಿಂದ ಈ ಭಾಗಕ್ಕೆ ಸುಂದರ ಕಾಂಡ ಎಂಬ ಹೆಸರು ಬಂದಿದೆ. ಹನುಮಂತ ಸಮ್ರುದ್ರ ಲಂಘನ ಮಾಡಿ ಲಂಕೆಯನ್ನು ಪ್ರವೇಶಿಸುತ್ತಾನೆ. ಸೀತೆಯು ರಾವಣನ ರಾಜ್ಯದಲ್ಲಿರುವ ಅಶೋಕವನದಲ್ಲಿ ಇರುವ ವಿಷಯವನ್ನುರಾಮನಿಗೆ ತಿಳಿಸುತ್ತಾನೆ.
- ಯುದ್ಧ ಕಾಂಡ - ಈ ಭಾಗದಲ್ಲಿ ರಾಮ - ರಾವಣರ ಯುದ್ಧದಲ್ಲಿ, ರಾವಣ ಸಂಹಾರದ ನಂತರ ರಾಮ ತನ್ನ ಪರಿವಾರದೊಡನೆ ಅಯೋಧ್ಯೆಗೆ ಹಿಂತಿರುಗುತ್ತನೆ. ಅಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆಯುವುದರ ಕುರಿತಾದ ವರ್ಣನೆಗಳಿವೆ.
- ಉತ್ತರ ಕಾಂಡ – ರಾಮ,ಸೀತೆಯರು ವನವಾಸದ ನಂತರ ಅಯೋಧ್ಯೆಯಲ್ಲಿ ಕಳೆದ ದಿನಗಳು. ಅಗಸನ ಮಾತಿನ ಕಾರಣದಿಂದಾಗಿ ಸೀತೆಯನ್ನು ರಾಮ ಕಾಡಿಗಟ್ಟುವುದು, ಕಾಲಾಂತರದಲ್ಲಿ ರಾಮಾವತಾರ ಸಮಾಪ್ತಿಗೊಂಡ ವಿವರಗಳಿವೆ.
ವಾಲ್ಮೀಕಿ ರಾಮಾಯಣದ ಮೊದಲ ಮತ್ತು ಕಡೆಯ ಕಾಂಡಗಳನ್ನು ವಾಲ್ಮೀಕಿಯೇ ಬರೆದಿರುವದರ ಬಗ್ಗೆ ಸಂದೇಹಗಳಿವೆ . ಈ ಎರಡು ಅಧ್ಯಾಯಗಳು ಮತ್ತು ಉಳಿದ ಭಾಗದ ನಡುವೆ ಶೈಲಿಯಲ್ಲಿ ವ್ಯತ್ಯಾಸ ಮತ್ತು ಕಥೆಯಲ್ಲಿ ಅನೇಕ ವಿರೋಧಾಬಾಸಗಳಿದ್ದರೂ ಈ ಎರಡು ಅಧ್ಯಾಯಗಳು ಕೃತಿಯ ಬೇರ್ಪಡಿಸಲಾಗದ ಅಂಗ ಎಂದು ಅನೇಕ ತಜ್ಞರ ಅಭಿಪ್ರಾಯವಾಗಿದೆ. [೨] ರಾಮಾಯಣದಲ್ಲಿ ಕಂಡುಬರುವ ರಾಮನ ಜನ್ಮ , ಅವನ ದೈವೀ ಅಂಶ ಮತ್ತು ರಾವಣನನ್ನು ಕುರಿತಾದ ದಂತಕಥೆಗಳಂಥ ಅನೇಕ ಪೌರಾಣಿಕ ಅಂಶಗಳ ಬಹುಭಾಗ ಈ ಎರಡು ಅಧ್ಯಾಯಗಳಲ್ಲೇ ಕಂಡುಬರುತ್ತದೆ .
[ಬದಲಾಯಿಸಿ] ರಾಮಾಯಣದ ಮುಖ್ಯ ಪಾತ್ರಗಳು

- ರಾಮ - ರಾಮ ರಾಮಾಯಣದ ನಾಯಕ. ರಾಮನನ್ನು ದೇವರ ಅವತಾರವೆಂದು ಚಿತ್ರಿಸಲಾಗಿದೆ. ರಾಮನು ಅಯೋಧ್ಯೆಯ ರಾಜನಾದ ದಶರಥನ ಹಿರಿಯ ಮಗ. ದಶರಥನಿಗೆ ಬಹಳ ಪ್ರೀತಿಪಾತ್ರನಾದ ಮಗ. ಅಯೋಧ್ಯೆಯ ಪ್ರಜೆಗಳಿಗೆಲ್ಲ ರಾಮನನ್ನು ಕಂಡರೆ ಬಹಳ ಪ್ರೀತಿ. ರಾಮ ಸದ್ಗುಣಗಳ ಸಾಕಾರ ರೂಪವಾಗಿದ್ದನು. ದಶರಥನ ಮೂವರು ಪತ್ನಿಯರಲ್ಲಿ ಒಬ್ಬಳಾದ ಕೈಕೇಯಿಯು ತನ್ನ ವರಗಳ ಮೂಲಕ ರಾಮನ ವನವಾಸಕ್ಕೆ ಕಾರಣಳಾಗುತ್ತಾಳೆ. ರಾಮನು ರಾಜನಾಗುವ ಅವಕಾಶವನ್ನು ಬಿಟ್ಟುಕೊಟ್ಟು, ತಂದೆಯಿಂದ ದೂರವಾಗಿ ಅರಣ್ಯಕ್ಕೆ ಹೋಗಬೇಕಾಗುತ್ತದೆ. ವನವಾಸದಲ್ಲಿದ್ದಾಗ ರಾಕ್ಷಸನಾದ ರಾವಣನು ರಾಮನಿಂದ ಕೊಲ್ಲಲ್ಪಡುತ್ತಾನೆ.
- ಸೀತಾ - ಸೀತೆಯು ರಾಮನ ಹೆಂಡತಿ ಮತ್ತು ಮಿಥಿಲೆಯ ರಾಜನಾದ ಜನಕನ ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ ರಾವಣನಿಂದ ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧನದಲ್ಲಿರಿಸಿರುತ್ತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ.
- ಹನುಮಂತ - ಹನುಮಂತ ಎಂಬುದು ಒಂದು ಕಪಿಯ ಹೆಸರು. ಇವನು ಕಿಷ್ಕಿಂದಾ ಎಂಬ ವಾನರ ಸಾಮ್ರಾಜ್ಯಕ್ಕೆ ಸೇರಿದವನು. ಹನುಮಂತ ರಾಮನ ಭಕ್ತ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಸಹಾಯ ಮಾಡುತ್ತಾನೆ.
- ಲಕ್ಷ್ಮಣ - ಲಕ್ಷ್ಮಣನ ರಾಮನ ತಮ್ಮ. ರಾಮ ವನವಾಸಕ್ಕೆಂದು ಹೊರಟಾಗ ಲಕ್ಶ್ಮಣನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ, ಅತ್ತಿಗೆಯರಾದ ರಾಮ ಮತ್ತು ಸೀತೆಯ ಸೇವೆ ಮಾಡುತ್ತಿರುತ್ತಾನೆ. ರಾವಣನಿಂದ ಪ್ರೇರಿತನಾದ ಮಾರೀಚ ಚಿನ್ನದ ಜಿಂಕೆಯ ವೇಷದಲ್ಲಿ ಸುಳಿದಾಡಿದಾಗ ಸೀತೆ ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ.
- ರಾವಣ - ರಾವಣನು ಲಂಕೆಯ ರಾಜನಾಗಿದ್ದು ಲಂಕಾಧಿಪತಿ ಎನಿಸಿಕೊಂಡಿದ್ದವನು. ರಾವಣನು ಬ್ರಹ್ಮನನ್ನು ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ,ಮನುಷ್ಯರಿಂದಲೂ,ಬೇರಾವ ಶಕ್ತಿಗಳಿಂದಲೂ ಸಾಯಬಾರದು" ಎಂಬುದೇ ಆ ವರ. ರಾವಣನಿಗೆ ಹತ್ತು ತಲೆಗಳು, ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕಕಂಟಕನಾಗಿ ಪರಿಣಮಿಸುತ್ತಾನೆ. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು ರಾಮ ಭೂಲೋಕದಲ್ಲಿ ಜನ್ಮ ತಾಳುತ್ತಾನೆ.
- ದಶರಥ - ದಶರಥ ಅಯೋಧ್ಯೆಯ ರಾಜ. ಶ್ರೀರಾಮನ ತಂದೆ. ದಶರಥನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮನು ಕೌಸಲ್ಯೆಯ ಮಗ. ಲಕ್ಷ್ನಣನು ಸುಮಿತ್ರೆಯ ಮಗ. ಭರತ ಮತ್ತು ಶತ್ರುಘ್ನರು ಕಿರಿಯ ರಾಣಿಯಾದ ಕೈಕೇಯಿಯ ಮಕ್ಕಳು. ಕೈಕೇಯಿ ದಶರಥನ ಪ್ರೀತಿಯ ಹೆಂಡತಿ. ದಶರಥನಲ್ಲಿ ಮೂರು ವರಗಳನ್ನು ಕೇಳಿಕೊಂಡು ರಾಮನನ್ನು ದಶರಥನಿಂದ ದೂರ ಮಾಡುತ್ತಾಳೆ. ಪ್ರಿಯಪುತ್ರನಾದ ರಾಮನ ವಿರಹವನ್ನು ಸಹಿಸದೆ ದಶರಥ ಎದೆಯೊಡೆದುಕೊಂಡು ಸಾಯುತ್ತಾನೆ.
- ಭರತ - ಭರತನು ದಶರಥನ ಎರಡನೆಯ ಮಗ. ರಾಮನು ಸೀತಾ,ಲಕ್ಶ್ಮಣರೊಡನೆ ವನವಾಸ ಹೊರಟಾಗ ಭರತ ಇರುವುದಿಲ್ಲ. ತನ್ನ ತಾಯಿಯೇ ರಾಮನನ್ನು ವನವಾಸಕ್ಕೆ ಕಳಿಸುವುದರ ಮೂಲಕ, ತನ್ನ ತಂದೆ ದಶರಥನ ಸಾವಿಗೆ ಕಾರಣಳಾದ ವಿಷಯ ಭರತನಿಗೆ ನಂತರ ತಿಳಿಯುತ್ತದೆ. ಕೂಡಲೇ ತಾಯಿಯ ಮೇಲೆ ಕೋಪಗೊಂಡು ರಾಮನನ್ನು ಹುಡುಕಲು ಹೊರಡುತ್ತಾನೆ. ಭರತ ಎಷ್ಟೇ ವಿನಂತಿಸಿಕೊಂಡರೂ, ತನ್ನ ತಂದೆಗೆ ಕೊಟ್ಟ ಮಾತಿಗೆ ತಪ್ಪ್ಪಲು ಒಪ್ಪದ ರಾಮ ಭರತನೊಡನೆ ಹಿಂತಿರುಗಲು ಒಪ್ಪುವುದಿಲ್ಲ. ಆಗ ಭರತ ರಾಮನ ಪಾದುಕೆಗಳನ್ನು ಪಡೆದುಕೊಂಡು ಹಿಂತಿರುಗುತ್ತಾನೆ. ತಾನು ಸಿಂಹಾಸನದ ಮೇಲೆ ಕುಳಿತುಕೊಳ್ಳದೆ, ಅಣ್ಣನ ಪಾದುಕೆಗಳನ್ನೇ ಸಿಂಹಾಸನದ ಮೇಲಿಟ್ಟು, ರಾಮನ ಪರವಾಗಿ ರಾಜ್ಯದ ಆಡಳಿತವನ್ನು ನಿರ್ವಹಿಸುತ್ತಿರುತ್ತಾನೆ.
- ವಿಶ್ವಾಮಿತ್ರ - ವಿಶ್ವಾಮಿತ್ರ ಒಬ್ಬ ಋಷಿ. ಅರಣ್ಯದಲ್ಲಿ ತನ್ನ ಹೋಮ,ಹವನಾದಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹರಿಸಲು ರಾಮ, ಲಕ್ಷ್ಮಣರನ್ನು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಾನೆ. ಮಾರ್ಗ ಮಧ್ಯದಲ್ಲಿ ವಿಶ್ವಾಮಿತ್ರ ರಾಮನನ್ನು ಮಿಥಿಲಾನಗರಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಜನಕರಾಜನು ಸೀತಾ ಸ್ವಯಂವರ ಏರ್ಪಡಿಸಿರುತ್ತಾನೆ. ಅಲ್ಲಿ ರಾಮನು ಶಿವ ಧನುಸ್ಸನ್ನು ಮುರಿದು ಸೀತೆಯನ್ನು ವಿವಾಹವಾಗುತ್ತಾನೆ.
[ಬದಲಾಯಿಸಿ] ಸಾರಾಂಶ
ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ, ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು.
[ಬದಲಾಯಿಸಿ] ರಾಮನ ಯೌವನ

ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮನು ರಾಕ್ಷಸರರ ರಾಜ ರಾವಣನ ಘೋರ ತಪಸ್ಸಿಗೆ ಮೆಚ್ಚಿ ಅವನನ್ನು ದೇವತೆಗಳು , ರಾಕ್ಷಸರು , ಅಥವಾ ಯಕ್ಷಕಿನ್ನರರು ಕೊಲ್ಲಲಾಗದೆಂಬ ವರವನ್ನು ಕೊಟ್ಟಿದ್ದನು .ಅದನ್ನು ಅವನು ಹಿಂತೆಗೆದುಕೊಳ್ಳುವದು ಸಾಧ್ಯವಿರಲಿಲ್ಲ . ಅಂಥ ವರವನ್ನು ಪಡೆದು ರಾವಣನು ತನ್ನ ಸಹಚರ ರಾಕ್ಷಸರೊಡಗೂಡಿ ಭೂಸಂಹಾರಕ್ಕೆ ತೊಡಗಿ , ಶಿಷ್ಟಜನರಿಗೆ ಅದರಲ್ಲೂ ಬ್ರಾಹ್ಮಣರಿಗೆ ಅವರ ಜಪತಪಗಳಿಗೆ ಉಪದ್ರವ ಕೊಡಲಾರಂಭಿಸಿದನು . ಇದನ್ನು ನೋಡಿ ಎಲ್ಲ ದೇವತೆಗಳು ಭೂಮಿಯನ್ನೂ ತಮ್ಮನ್ನು ಈ ದುಷ್ಟನಿಂದ ಕಾಪಾಡು ಎಂದು ಬ್ರಹ್ಮನ ಮೊರೆ ಹೊಕ್ಕರು . ಬ್ರಹ್ಮನು ವಿಷ್ಣುವಿನ ಬಳಿಸಾರಿ ದೇವತೆಗಳ ಚಿಂತೆಯನ್ನು ಅರುಹಿ , ರಾವಣನು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಮರಣಹೊಂದದ ವರವನ್ನು ಪಡೆದಿಲ್ಲದಿರುವದರಿಂದ ವಿಷ್ಣುವೇ ಮಾನವನಾಗಿ ಅವತಾರವೆತ್ತಿ ರಾವಣನನ್ನು ಸಂಹರಿಸಬೇಕೆಂದು ಕೇಳಿಕೊಂಡನು .
ಈ ಮಧ್ಯೆ ಕೋಸಲವನ್ನು ಆಳುತ್ತಿದ್ದ ಅಯೋಧ್ಯೆಯ ರಾಜ ದಶರಥನಿಗೆ ಮಕ್ಕಳಿಲ್ಲದ್ದರಿಂದ ತನ್ನ ಉತ್ತರಾಧಿಕಾರಿಯ ಬಗ್ಗೆ ಚಿಂತೆಯಲ್ಲಿದ್ದನು . ಮಂತ್ರಿಗಳು ಹಾಗೂ ಪುರೋಹಿತರ ಸಲಹೆಯ ಮೇರೆಗೆ ಪುತ್ರಸಂತಾನಕ್ಕಾಆಗಿ ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದನು. ವಿಷ್ಣು ದಶರಥನ ಜ್ಯೇಷ್ಠ ಪುತ್ರನಾಗಿ ಜನಿಸಲು ನಿರ್ಧರಿಸಿ ದೈವೀ ಪುರುಷನೊಬ್ಬನನ್ನು ಯಜ್ಞಕುಂಡದಲ್ಲಿ ಹುಟ್ಟುವಂತೆ ಮಾಡಿದನು. ಈ ದೈವೀ ಪುರುಷ ದಶರಥನಿಗೆ ಅಮೃತವಿದ್ದ ಚಿನ್ನದ ಕಲಶವೊಂದನ್ನು ನೀಡಿ ತನ್ನ ರಾಣಿಯರಿಗೆ ಅದನ್ನು ನೀಡುವಂತೆ ಹೇಳಿದನು. ದಶರಥನು ಅದನ್ನು ತನ್ನ ಮೂವರು ರಾಣಿಯರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಇವರ ನಡುವೆ ಹಂಚಿದನು. ಕಾಲಕ್ರಮೇಣ ಅವರು ಗರ್ಭಿಣಿಯರಾಗಿ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ರಾಣಿ ಕೌಸಲ್ಯೆಗೆ ಹಿರಿಯ ಮಗನಾಗಿ ರಾಮನೂ , ಕೈಕೇಯಿಗೆ ಭರತನೂ ಮತ್ತು ಲಕ್ಷ್ಮಣ ಮತ್ತು ಶತ್ರುಘ್ನರು ಸುಮಿತ್ರೆಗೂ ಜನಿಸಿದರು.
ಈ ಬಾಲಕರು ವಸಿಷ್ಠರಿಂದ ಶಾಸ್ತ್ರಗಳನ್ನೂ ಬಿಲ್ಲುವಿದ್ಯೆಯನ್ನೂ ಕಲಿಯುತ್ತ ಬೆಳೆದರು. ಒಂದು ದಿನ ವಿಶ್ವಾಮಿತ್ರರು ರಾಜ್ಯಕ್ಕೆ ಬಂದು ದಶರಥನಲ್ಲಿ ತಮ್ಮ ಯಜ್ಞಯಾಗಾದಿಗಳಿಗೆ ಭಂಗತರುತ್ತಿರುವ ರಾಕ್ಷಸರಿಂದ ತಮ್ಮನ್ನು ಕಾಪಾಡಲು ರಾಮನನ್ನು ಕಳಿಸಬೇಕೆಂದು ಕೋರಿದರು. ಒಲ್ಲದ ಮನ್ಸಸ್ಸಿನಿಂದ ವಿಶ್ವಾಮಿತ್ರರೊಡನೆ ರಾಮಲಕ್ಷ್ಮಣರನ್ನು ಕಳಿಸಿಕೊಡಲು ಅವನು ಒಪ್ಪಿದನು. ಈ ಸೋದರರು ತಮ್ಮ ಕರ್ತವ್ಯವನ್ನು ಪೂರೈಸಲು ವಿಶ್ವಾಮಿತ್ರನು ಸಂತೋಷಪಟ್ಟು ಅವರಿಗೆ ಅನೇಕ ದಿವ್ಯಾಸ್ತ್ರಗಳನ್ನು ಅನುಗ್ರಹಿಸಿದನು.
ವಿಶ್ವಾಮಿತ್ರರೊಡನೆಯ ಪ್ರಯಾಣದ ಕೊನೆಯಲ್ಲಿ ರಾಮನು ಮಿಥಿಲಾ ರಾಜ್ಯಕ್ಕೆ ಬಂದನು. ಅಲ್ಲಿ ಜನಕ ಮಹಾರಾಜನು ತನ್ನ ಮಗಳು ಅಪ್ರತಿಮ ಸುಂದರಿಸೀತೆಯನ್ನು ತನ್ನ ಆಸ್ಥಾನದಲ್ಲಿದ್ದ ಶಿವನ ಬಹಳ ಬಲಿಷ್ಠವಾದ ಧನುಸ್ಸನ್ನು ಬಗ್ಗಿಸಿದವನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲಿರುವದನ್ನು ಅರಿತನು. ಅನೇಕ ವಿವಾಹೇಚ್ಛುಗಳು ಪ್ರಯತ್ನಿಸಿ ಸೋತಿದ್ದ ಈ ಕಾರ್ಯವನ್ನು ಸಾಧಿಸಲು ರಾಮನು ನಿಶ್ಚಯಿಸಿದನು. ಅವನು ಜನಕನ ಆಸ್ಥಾನಕ್ಕೆ ಬಂದಾಗ ಜನಕನು ಅವನ ಲಾವಣ್ಯಕ್ಕೆ ಮಾರುಹೋದನು. ಐದು ಸಾವಿರ ಜನರು ಆ ಬಿಲ್ಲನ್ನು ಎಂಟು ಗಾಲಿಗಳ ರಥದಲ್ಲಿ ಆಸ್ಥಾನಕ್ಕೆ ಎಳೆದು ತಂದರು. ರಾಮನು ಬಹಳ ಸುಲಭವಾಗಿ ಅದನ್ನು ಮುರಿಯುವಷ್ಟು ಬಗ್ಗಿಸಿದನು. ಜನಕನು ಸಂತಸದಿಂದ ತನ್ನ ಲಾವಣ್ಯವತಿ ಮಗಳನ್ನು ರಾಮನಿಗೆ ಮದುವೆ ಮಾಡಿಕೊಟ್ಟನು. ಭವ್ಯವದ ಮದುವೆ ಸಮಾರಂಭದ ನಂತರ ನವಜೋಡಿಯು ಅಯೋಧ್ಯೆಗೆ ಪ್ರಯಾಣ ಬೆಳೆಸಿತು.
[ಬದಲಾಯಿಸಿ] ರಾಮನ ವನವಾಸ
ರಾಜ ದಶರಥನು ತನ್ನ ಹಿರಿಯ ಮಗ ಹಾಗೂ ಪದ್ಧತಿಯಂತೆ ಉತ್ತರಾಧಿಕಾರಿಯಾದ ರಾಮನನ್ನು ಯುವರಾಜನನ್ನಾಗಿ ಮಾಡಲು ನಿರ್ಧರಿಸಿದನು.ಅವನ ಪ್ರಜೆಗಳು ಈ ಘೋಷಣೆಯನ್ನು ಸಂತಸದಿಂದ ಸ್ವಾಗತಿಸಿದರು . ಇಡೀ ನಗರವು ಈ ಸಂಬಂಧದ ಉತ್ಸವವನ್ನೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳಲ್ಲಿ ತೊಡಗಿತು . ದಶರಥನು ಈ ಆಚರಣೆಗಳ ಸಂಬಂಧ ಚರ್ಚಿಸಲು ತನ್ನ ಪತ್ನಿ ಕೈಕೇಯಿ ಇದ್ದಲ್ಲಿಗೆ ಹೋದನು . ಆದರೆ ದುಷ್ಟದಾಸಿಯಾದ ಮಂಥರೆಯಿಂದ ದುರ್ಬೋಧನೆಗೊಳಗಾಗಿ 'ಯುವರಾಜನಾಗುತ್ತಿರುವದು ಪ್ರವಾಸದಲ್ಲಿರುವ ತನ್ನ ಮಗ ಭರತನಲ್ಲ, ಆದರೆ ಕೌಸಲ್ಯೆಯ ಮಗ ರಾಮ' ಎಂದು ಅಸೂಯೆಪಟ್ಟು ದುಃಖಿಸಿದಳು . ದಶರಥನು ಬಂದಾಗ ಅವಳು ಅಂತಃಪುರದಲ್ಲಿ ಕಣ್ಣೀರುಗರೆಯುತ್ತಿದ್ದಳು. ಚಿಂತಿತನಾದ ದಶರಥನ ಪ್ರಶ್ನೆಗಳಿಗೆ ಉತ್ತರವಾಗಿ ಕೈಕೇಯಿ, ಅನೇಕ ವರ್ಷಗಳ ಹಿಂದೆ ದಶರಥ ತನಗಿತ್ತಿದ್ದ ಎರಡು ವರಗಳನ್ನು ನೆನಪಿಸಿದಳು. ಈ ವರಗಳನ್ನು ಪೂರೈಸಿದರೆ ಪ್ರಸನ್ನಳಾಗುವುದಾಗಿ ಹೇಳಿದಳು. ಇದಕ್ಕೆ ಪೂರಕವಾಗಿ ಅವಳು, ಮೊದಲನೆಯದಾಗಿ, ತನ್ನ ಮಗ ಭರತನನ್ನು ಯುವರಾಜನಾಗಿ ನೇಮಿಸಬೇಕೆಂದೂ, ಎರಡನೆಯದಾಗಿ, ರಾಮನನ್ನು ಹದಿನಾಲ್ಕು ವರ್ಷ ಕಾಲ ಘೋರವಾದ ದಂಡಕಾರಣ್ಯಕ್ಕೆ ವನವಾಸಕ್ಕೆ ಕಳಿಸಬೇಕೆಂದೂ ಕೇಳಿದಳು. ದುಃಖಿತನಾದ ದಶರಥ, ಆದಾಗ್ಯೂ ತನ್ನ ವಚನವನ್ನು ಪರಿಪಾಲಿಸಿಕೊಳ್ಲಲು ನಿರ್ಧರಿಸಿದನು. ಆದರ್ಶ ಪುತ್ರನಾದ ರಾಮ, ಸಿಂಹಾಸನದ ಮೇಲೆ ತನಗಿದ್ದ ಹಕ್ಕನ್ನು ಬಿಟ್ಟುಕೊಟ್ಟು ವನವಾಸಕ್ಕೆ ಹೊರಡಲು ಸಿದ್ಧನಾದನು. ಅವನ ನಿಷ್ಠಾವಂತ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣ, ರಾಮನ ಜೊತೆ ಹೊರಡಲು ನಿರ್ಧರಿಸಿದರು. ದಶರಥ ದುಃಖದಲ್ಲಿದ್ದಂತೆ ರಾಮ, ಅಯೋಧ್ಯೆಯ ಪರಿತಪ್ತ ಜನರಿಂದ ಹಿಂಬಾಲಿಸಲ್ಪಟ್ಟು ವನವಾಸಕ್ಕೆ ತೆರಳಿದನು. ಸ್ವಲ್ಪ ಕಾಲಾನಂತರ ದಶರಥ ದುಃಖದಿಂದ ಮರಣವನ್ನಪ್ಪಿದನು.
[ಬದಲಾಯಿಸಿ] ಸೀತಾಪಹರಣ

ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆ ಮತ್ತು ಅಲ್ಲಿನ ಜನರನ್ನು ಬಿಟ್ಟು ಗಂಗಾ ನದಿಯನ್ನು ದಾಟಿ ಕಾಡಿನೊಳಕ್ಕೆ ಹೋದರು. ಚಿತ್ರಕೂಟ ಎಂಬ ಸುಂದರ ಸ್ಥಳವನ್ನು ಹುಡುಕಿ ಅಲ್ಲಿ ತಮ್ಮ ಕುಟೀರವನ್ನು ಸ್ಥಾಪಿಸಿದರು. ಅತ್ಯಂತ ಸುಂದರವಾಗಿದ್ದ ಈ ಸ್ಥಳದಲ್ಲಿ ಎಲ್ಲ ರೀತಿಯ ಫಲಪುಷ್ಪಗಳಿದ್ದು ಸಂಪೂರ್ಣ ಪ್ರೇಮದಿಂದ ಕೂಡಿದ್ದ ಕುಟೀರ ಭೂಮಿಯ ಮೇಲಿದ್ದ ಸ್ವರ್ಗವೇ ಆಯಿತು. ಕಾಡಿನಲ್ಲಿ ರಾಮ ಗರುಡರಾಜನಾದ ಜಟಾಯುವಿನೊಂದಿಗೆ ಮಿತ್ರತ್ವವನ್ನು ಸ್ಥಾಪಿಸಿದ.
ಇಷ್ಟರಲ್ಲಿ ಅಯೋಧ್ಯೆಗೆ ಮರಳಿ ಬಂದ ಭರತ, ನಡೆದ ವಿಷಯವನ್ನು ಕೇಳಿ, ರಾಮನನ್ನು ವನವಾಸಕ್ಕೆ ಕಳಿಸುವಲ್ಲಿ ತನ್ನ ತಾಯಿ ಕೈಕೇಯಿ ವಹಿಸಿದ ಪಾತ್ರದ ಬಗ್ಗೆ ಕೋಪಗೊಂಡನು. ರಾಮನನ್ನು ಹಿಂದಕ್ಕೆ ತರುವ ಉದ್ದೇಶದಿಂದ ಕಾಡಿಗೆ ಬಂದು ರಾಮನನ್ನು ಹಿಂದಕ್ಕೆ ಬರುವಂತೆ ಬೇಡಿಕೊಂಡನು. ತಂದೆಯ ವಚನದಿಂದ ಬದ್ಧನಾದ ರಾಮ ಇದಕ್ಕೆ ನಿರಾಕರಿಸಿದಾಗ ರಾಮನ ಪಾದುಕೆಗಳನ್ನು ಅಯೋಧ್ಯೆಗೆ ಒಯ್ದು ಸಿಂಹಾಸನದ ಮೇಲೆ ಸ್ಥಾಪಿಸಿ ರಾಮನ ಹೆಸರಿನಲ್ಲಿ ನಂದಿಗ್ರಾಮದಿಂದ ಭರತ ರಾಜ್ಯವನ್ನು ಆಳುತ್ತಿದ್ದನು. ಹದಿನಾಲ್ಕು ವರ್ಷಗಳಲ್ಲಿ ರಾಮ ಮರಳಿ ಬರದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನೂ ಭರತ ತೆಗೆದುಕೊಂಡನು.
ಒಂದು ದಿನ, ರಾವಣನ ತಂಗಿಯಾದ ಶೂರ್ಪನಖಿ ಎಂಬ ರಾಕ್ಷಸಿ ಚಿತ್ರಕೂಟದಲ್ಲಿ ರಾಮನನ್ನು ಕಂಡು ಅವನನ್ನು ಪ್ರೇಮಿಸಿದಳು. ಸುಂದರ ಹುಡುಗಿಯ ವೇಷ ಧರಿಸಿ ರಾಮನನ್ನು ಆಕರ್ಷಿಸಲು ಪ್ರಯತ್ನಿಸಿದಳು. ತನ್ನ ಪತ್ನಿಯತ್ತ ನಿಷ್ಠಾವಂತನಾದ ರಾಮ ಪ್ರತಿಕ್ರಿಯೆ ತೋರಿಸಲಿಲ್ಲ. ಶೂರ್ಪನಖಿಯ ವರ್ತನೆಯಿಂದ ಕುಪಿತನಾದ ಲಕ್ಷ್ಮಣ ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸಿಬಿಟ್ಟನು. ರಾವಣನತ್ತ ಮರಳಿ ಶೂರ್ಪನಖಿ ಇದರ ಬಗ್ಗೆ ದೂರಿತ್ತಳು. ಅವಳಿಂದ ಸೀತೆಯ ಸೌಂದರ್ಯದ ಬಗ್ಗೆ ಕೇಳಿದ ರಾವಣ, ರಾಮನನ್ನು ಕೊಂದು ಸೀತೆಯನ್ನು ಹೊತ್ತೊಯ್ಯುವ ನಿರ್ಧಾರವನ್ನು ಮಾಡಿದನು. ರಾವಣನ ಸಹಾಯಕ್ಕೆ ಬಂದ ಮಾರೀಚ ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಕುಟೀರದಲ್ಲಿ ಬಿಟ್ಟು ದೂರ ಬರುವಂತೆ ಮಾಡಿದನು. ಹೊರಡುವ ಮುನ್ನ, ಲಕ್ಷ್ಮಣ ಮಣ್ಣಿನಲ್ಲಿ ಒಂದು ಗೆರೆಯನ್ನು ಎಳೆದು ಅದರ ಒಳಗೆ ಇರುವವರೆಗೂ ಸೀತೆ ಸುರಕ್ಷಿತಳಾಗಿ ಇರುವಳೆಂದು ತಿಳಿಸಿ ಹೋದನು. ಮುದುಕನ ವೇಷ ಧರಿಸಿ ಬಂದ ರಾವಣ ಅನ್ನದಾನ ಮಾಡುವಂತೆ ಸೀತೆಯನ್ನು ಕೇಳಿಕೊಂಡನು. ಗೆರೆಯನ್ನು ದಾಟಲು ಹೆದರಿದರೂ, ಅವನಿಗೆ ದಾನ ಮಾಡಲು ಸೀತೆ ಮುಂದೆ ಬಂದಾಗ ರಾವಣ ಅವಳನ್ನು ಹೊತ್ತುಕೊಂಡು ತನ್ನ ಪುಷ್ಪಕ ವಿಮಾನದಲ್ಲಿ ಹಾರಿದನು. ಇದನ್ನು ಕಂಡ ಜಟಾಯು ಸೀತೆಯ ರಕ್ಷಣೆಗೆ ಬಂದಾಗ ರಾವಣ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹೋದನು.
ಹಿಂದಕ್ಕೆ ಮರಳಿದ ರಾಮ-ಲಕ್ಷ್ಮಣರು ಸೀತೆಯನ್ನು ಕಾಣದೆ ಹುಡುಕುತ್ತಿದ್ದಾಗ ಜಟಾಯುವಿನಿಂದ ಸೀತಾಪಹರನದ ವಿಷಯವನ್ನು ತಿಳಿದರು.
[ಬದಲಾಯಿಸಿ] ವಾನರ ಸಾಮ್ರಾಜ್ಯ
ತಮ್ಮ ಹುಡುಕಾಟವನ್ನು ಮುಂದುವರೆಸಿ ರಾಮ ಲಕ್ಷ್ಮಣರು ಕಿಷ್ಕಿಂದೆಯ ವಾನರ ರಾಜನಾದ ಸುಗ್ರೀವ ಹಾಗೂ ಹನುಮಂತನನ್ನು ಭೇಟಿಯಾಗುತ್ತಾರೆ. ಹನುಮಂತ ಸುಗ್ರೀವನ ಸೈನ್ಯಕ್ಕೆ ಸೇನಾಧಿಪತಿ. ಸೀತೆ ರಾವಣನ ರಥದಿಂದ ಎಸೆದ ಆಭರಣಗಳು ವಾನರರಿಗೆ ದೊರೆತಿರುತ್ತದೆ. ತನ್ನ ಅಣ್ಣ ವಾಲಿಯಿಂದ ಸಾಮ್ರಾಜ್ಯದಿಂದ ಹೊರಗಟ್ಟಲ್ಪಟ್ಟ ಸುಗ್ರೀವ ರಾಮನ ಸಹಾಯ ಪಡೆಯುತ್ತಾನೆ. ಪರಸ್ಪರ ಕಾಳಗದಲ್ಲಿ ರಾಮನ ಸಹಾಯ ಪಡೆದ ಸುಗ್ರೀವನಿಂದ ವಾಲಿ ಮಡಿಯುತ್ತಾನೆ.
ಸಹಾಯ ಮಾಡಿದ ರಾಮನೊಂದಿಗೆ ಸುಗ್ರೀವ ತನ್ನ ಸೈನ್ಯವನ್ನು ಕೂಡಿ ಲಂಕೆಯೆಡೆಗೆ ಹೊರಡುತ್ತಾನೆ.
ರಾಮ ,ಸುಗ್ರೀವರು ಸೀತೆಯನ್ನು ಹುಡುಕಲು ತಮ್ಮ ವಾನರಸೇನೆಯನ್ನು ನಾನಾದಿಕ್ಕಿಗೆ ಕಳಿಸಿದರು .ಅವರು ರಾವಣನಿಂದ ಹತನಾದ ಜಟಾಯುವಿನ ಸೋದರ , ಸಂಪಾತಿಯನ್ನು ಭೇಟಿಯಾಗುವವರೆಗೆ ಅವರ ಪ್ರಯತ್ನಗಳಿಗೆ ವಿಶೇಷ ಫಲ ದೊರೆಯಲಿಲ್ಲ . ಸಂಪಾತಿಯು ಅಂಗವೈಕಲ್ಯದಿಂದಾಗಿ ಹಾರಲು ಅಸಮರ್ಥನಾಗಿದ್ದನು . ಅವನು ಸೂರ್ಯನ ಅತಿ ಸಮೀಪಕ್ಕೆ ಹಾರಿದ್ದರಿಂದ ಅವನ ರೆಕ್ಕೆಗಳು ಸುಟ್ಟುಹೋಗಿದ್ದವು . ಬಲಶಾಲಿಯಾದ ಜಟಾಯುವು ಅವನನ್ನು ಸಾವಿನಿಂದ ರಕ್ಷಿಸಿದ್ದನು. ಇಬ್ಬರಲ್ಲಿ ಜಟಾಯು ದೇಹಬಲದಿಂದ ಗಟ್ಟಿಗನಾದರೂ ಸಂಪಾತಿಗೆ ಕಣ್ಣಿನ ಹೆಚ್ಚಿನ ದೃಷ್ಟಿಯಿದ್ದು ನೂರಾರು ಯೋಜನಗಳಷ್ಟು ದೂರ ನೋಡಬಲ್ಲವನಾಗಿದ್ದನು . ರಾವಣನು ತನ್ನ ಸೋದರನನ್ನು ಕೊಂದದ್ದನ್ನು ಕೇಳಿ ಅವನು ವಾನರರಿಗೆ ಸಹಾಯ ಮಾಡಲು ಒಪ್ಪಿದನು . ಅನತಿಕಾಲದಲ್ಲೇ ಅವನು ಸೀತೆಯನ್ನು ದಕ್ಷಿಣದಿಕ್ಕಿನಲ್ಲಿರುವದಾಗಿ ಪತ್ತೆಹಚ್ಚಿದನು. ಅವಳು ದಕ್ಷಿಣದಲ್ಲಿ ಸಮುದ್ರದಾಚೆಗಿನ ಲಂಕಾದ್ವೀಪದಲ್ಲಿನ ಅಶೋಕವನವೊಂದರಲ್ಲಿ ಸೆರೆಯಾಗಿರುವದನ್ನು ನೋಡಿ ಹೇಳಿದನು .
[ಬದಲಾಯಿಸಿ] ಲಂಕೆಯಲ್ಲಿ ಹನುಮಂತ
ಸುಗ್ರೀವನು ತನ್ನ ವಾನರಸೈನ್ಯವನ್ನು ಅಂಗದನ ನೇತೃತ್ವದಲ್ಲಿ ದಕ್ಷಿಣಕ್ಕೆ ಕಳಿಸಿದನು. ಹನುಮಂತನು ಅಂಗದನ ಸೇನಾಪತಿಯಾಗಿ ತೆರಳಿದನು. ಅವರು ದಕ್ಷಿಣದಲ್ಲಿ ಬಹುದೂರ ಹೋದಮೇಲೆ ತಮ್ಮ ಮತ್ತು ಲಂಕಾದ್ವೀಪದ ನಡುವೆ ಮಹಾಸಾಗರವನ್ನು ಕಂಡರು. ಆ ಸಮುದ್ರವನ್ನು ದಾಟುವ ಬಗೆ ಹೇಗೆಂದು ತಿಳಿಯದಾದರು .ತನ್ನ ಸೈನಿಕರಿಗೆ ಅಲ್ಲಿಯೇ ಇರಹೇಳಿ ಹನುಮಂತನು ತನ್ನದೇಹವನ್ನು ಹಿಗ್ಗಿಸಿ ಮಹಾರೂಪ ತಾಳಿ ಅಪಾರ ಜಲರಾಶಿಯನ್ನು ಜಿಗಿದು ದಾಟಿ ತ್ರಿಕೂಟಪರ್ವತದ ಮೇಲೆ ಇಳಿದು ಲಂಕಾಪಟ್ಟಣದತ್ತನೋಡಿದನು. ನಗರಕ್ಕೆ ಭಾರೀ ಪಹರೆ ಇದ್ದದ್ದರಿಂದ ಬೆಕ್ಕಿನ ರೂಪತಾಳಿ ನಗರವನ್ನು ನುಸುಳಿ ನಗರವನ್ನು ವೀಕ್ಷಿಸಿದನು. ರಾವಣನು ತನ್ನ ಅಂತಃಪುರದಲ್ಲಿ ಸುಂದರಸ್ತ್ರೀಯರಿಂದ ಸುತ್ತುವರಿಯಲ್ಪಟ್ಟಿದ್ದನು. ಆದರೆ ಅಲ್ಲಿ ಸೀತೆ ಇರಲಿಲ್ಲ. ತನ್ನ ಅನ್ವೇಷಣೆಯನ್ನು ಮುಂದುವರಿಸಿ ಕೊನೆಗೆ ಆಶೋಕವನದಲ್ಲಿ ಮರದ ಕೆಳಗೆ ರಾಕ್ಷಸಿಯರಿಂದ ಸುತ್ತುವರೆಯಲ್ಪಟ್ಟು ದುಃಖದಿಂದ ಕಳೆಗುಂದಿದ ಸೌಂದರ್ಯವುಳ್ಳ ಸೀತೆಯನ್ನು ನೋಡಿದನು.
ಸಣ್ಣ ಕಪಿಯೊಂದರ ವೇಷ ತಾಳಿ ಹನುಮಂತನು ಮರದಿಂದ ಕೆಳಗೆ ಜಿಗಿದು ಅವಳಿಗೆ ರಾಮನ ಉಂಗುರವನ್ನು ಕೊಟ್ಟು ಅವಳಿಂದ ಒಂದು ಉಂಗುರವನ್ನು ತೆಗೆದುಕೊಂಡನು . ಅವಳನ್ನು ತನ್ನೊಡನೆ ಕೊಂಡೊಯ್ಯಲು ಸಿದ್ಧವಾಗಲು , ರಾಮನೇ ತನ್ನನ್ನು ರಕ್ಷಿಸಲು ಬರಬೇಕೆಂದು ಹೇಳಿ ತನ್ನನ್ನು ಹುಡುಕಿದ್ದಕ್ಕೆ ಸಾಕ್ಷಿಯಾಗಿ ಒಂದು ಬೆಲೆಯುಳ್ಳ ವಜ್ರವನ್ನು ರಾಮನಿಗೆ ಕೊಡುವದಕ್ಕಾಗಿ ಹನುಮಂತನಿಗೆ ಕೊಟ್ಟಳು. ಅವರು ಮಾತನಾಡುತ್ತಿರುವಾಗ ಅಲ್ಲಿ ಬಂದ ರಾವಣನು ಅವಳ ಮನವೊಲಿಸಲು ವ್ಯರ್ಥ ಪ್ರಯತ್ನ ಮಾಡಿ ಅವಳು ಇನ್ನೆರಡು ತಿಂಗಳಲ್ಲಿ ತನ್ನ ವಶವಾಗದಿದ್ದರೆ ತನ್ನ ಬೆಳಗಿನ ಉಪಹಾರಕ್ಕಾಗಿ ಅವಳ ಅಂಗಾಂಗಗಳನ್ನು ತುಂಡರಿಸುವದಾಗಿ ಬೆದರಿಸಿದನು .
ಸಿಟ್ಟಿಗೆದ್ದ ಹನುಮಂತನು ಮಾವಿನ ತೋಟವನ್ನು ಹಾಳುಮಾಡಿದನು. ಅವನನ್ನು ರಾಕ್ಷಸರು ಬಂಧಿಸಿ ರಾವಣನ ಮುಂದೆ ಕೊಂಡೊಯ್ದರು. ಹನುಮಂತನು ತಾನು ರಾಮನ ದೂತನೆಂದು ಹೇಳಿ , ಸೀತೆಯನ್ನು ರಾಮನಿಗೆ ಒಪ್ಪಿಸು ಇಲ್ಲವೆ ರಾಮನ ಕ್ರೋಧಕ್ಕೆ ಬಲಿಯಾಗು ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ರಾವಣನು ಅವನನ್ನು ಕೊಲ್ಲಲು ಆಜ್ಞೆ ಮಾಡಿದನು.
ಆಗ ರಾವಣನ ನ್ಯಾಯಪರ ತಮ್ಮನಾದ ವಿಭೀಷಣನು ಮಧ್ಯಪ್ರವೇಶಿಸಿ ರಾವಣನಿಗೆ ಶಾಸ್ತ್ರಗಳಲ್ಲಿ ಹೇಳಿದ ಪ್ರಕಾರ ದೂತನನ್ನು ಕೊಲ್ಲುವದುಅನುಚಿತ ಎಂದು ಹೇಳಿ ಅವನ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಲು ಸಲಹೆ ಮಾಡಿದನು. ರಾವಣನು ಒಪ್ಪಿ ತನ್ನ ರಾಕ್ಷಸ ಸೇವಕರಿಗೆ ಹನುಮಂತನ ಬಾಲಕೆ ಬೆಂಕಿಹಚ್ಚಲು ಆಜ್ಞೆ ಮಾಡಿದನು . ಬಾಲಕ್ಕೆ ಬೆಂಕಿ ಹತ್ತಿದ ನಂತರ ಹನುಮಂತನು ತನ್ನ ಶರೀರವನ್ನು ಸಣ್ಣದಾಗಿ ಮಾಡಿಕೊಂಡು ಕಟ್ಟುಗಳಿಂದ ಪಾರಾಗಿ ಮನೆಗಳ ಮೇಲೆಲ್ಲ ಜಿಗಿಯುತ್ತ ಹೋಗಿ ಲಂಕೆಯಲ್ಲೆಲ್ಲ ಬೆಂಕಿಯನ್ನು ಹರಡಿದನು .ಅವನು ರಾಮ, ಸುಗ್ರೀವರಿದ್ದಲ್ಲಿಗೆ ಮರಳಿ ಬಂದು ಸೀತೆಯು ಬಂಧನದಲ್ಲಿರುವದನ್ನು ತಿಳಿಸಿ ಯುದ್ಧಸಿದ್ಧತೆಗೆ ತೊಡಗಿದನು.
[ಬದಲಾಯಿಸಿ] ಲಂಕೆಯಲ್ಲಿ ಯುದ್ಧ
ಸಮುದ್ರಕ್ಕೆ ಸೇತುವೆಯನ್ನು ಕಟ್ಟದ ಹೊರತು ಹನುಮಂತನ ಹೊರತು ಬೇರಾರೂ ಅದನ್ನು ದಾಟಲಾರರು ಎಂದು ರಾಮನು ನಿರ್ಣಯಿಸಿದನು . ವ್ಯರ್ಥವಾಗಿ ಮೂರು ದಿನ ಕಾದರೂ ತನ್ನನ್ನು ಅಲಕ್ಷಿಸಿದ್ದಕ್ಕಾಗಿ ಸಿಟ್ಟಿಗೆದ್ದ ರಾಮನು ತನ್ನ ಬಾಣಗಳನ್ನು ಸಮುದ್ರಕ್ಕೆ ಗುರಿಯಿಡಲು ವರುಣನು ಪ್ರತ್ಯಕ್ಷವಾದನು . ಸಮುದ್ರದೇವತೆಯಾದ ಅವನು 'ಸೇತುವೆಯನ್ನು ಕಟ್ಟುವದಾದರೆ ನೆಲದ ಮೇಲೇ ಕಟ್ಟಿದಷ್ಟು ದೃಢವಾಗಿರುವಂತೆ ಸೇತುವೆಗೆ ಅಲೆಗಳು ಅನುಕೂಲವಾಗಿರುವಂತೆ ಏರ್ಪಡಿಸುವದಾಗಿ' ಮಾತು ಕೊಟ್ಟನು.
ರಾಮನು ಸೈನ್ಯದೊಂದಿಗೆ ಬರುವ ವಾರ್ತೆಯಿಂದ ಲಂಕೆಯಲ್ಲಿ ಭೀತಿಯ ವಾತಾವರಣ ಉಂಟಾಯಿತು. ರಾವಣನ ತಮ್ಮನಾದ ವಿಭೀಷಣನು ,ರಾಮನೊಂದಿಗೆ ಸಂಧಿ ಮಾಡಿಕೊಳ್ಳಲು ರಾವಣನಿಗೆ ಸಲಹೆಯಿತ್ತಾಗ ರಾವಣನು ಅತೀವ ಸಿಟ್ಟಿಗೆದ್ದದ್ದರಿಂದ , ರಾಮನನ್ನು ಸೇರಿಕೊಂಡನು. ನಂತರ ನಡೆದ ಘನಘೋರ ಯುದ್ಧದಲ್ಲಿ ದೇವತೆಗಳೂ ಭಾಗವಹಿಸಿದರು. ವಿಷ್ಣು ಮತ್ತು ಇಂದ್ರ ರಾಮನ ಪಕ್ಷವನ್ನೂ ಅಸುರರು ರಾವಣನ ಪಕ್ಷವನ್ನೂ ವಹಿಸಿದರು.
ಎರಡೂ ಪಕ್ಷಗಳಿಗೆ ಮಿಶ್ರಫಲಗಳೊಡನೆ ಯುದ್ಧ ಸ್ವಲ್ಪ ಕಾಲ ನಡೆದ ನಂತರ ರಾಮ-ರಾವಣರ ನಡುವೆ ನೇರ ಹೋರಾಟದ ಮೂಲಕ ಯುದ್ಧದ ಫಲಿತಾಂಶವನ್ನು ಘೋಷಿಸುವುದೆಂದು ತೀರ್ಮಾನಿಸಲಾಯಿತು. ಈ ಕಾಳಗದ ತೀವ್ರತೆಯಿಂದ ದೇವ-ದೇವತೆಗಳೂ ಭೀತರಾದರು. ರಾಮನ ಪ್ರತಿಯೊಂದು ಬಾಣವೂ ರಾವಣನ ಒಂದು ತಲೆ ಕತ್ತರಿಸಿದರೂ ಅದು ಮತ್ತೆ ಬೆಳೆಯುತ್ತಿತ್ತು. ಏನು ಮಾಡಬೇಕೆಂದು ತೋಚದೆ ಇದ್ದ ರಾಮನಿಗೆ ರಾವಣನ ದೇಹದತ್ತ ಗುರಿಯಿಡುವಂತೆ ವಿಭೀಷಣ ತಿಳಿಸಿಕೊಟ್ಟ.
ಈ ಉಪಾಯ ಫಲಿಸಿ ರಾವಣ ಉರುಳಿ ಬಿದ್ದಂತೆ, ಆಕಾಶದಿಂದ ಪುಷ್ಪಗಳು ರಾಮನ ಮೇಲೆ ಮಳೆಗರೆದವು. ಅವನ ಕಿವಿಗಳಲ್ಲಿ ದೈವೀ ಸಂಗೀತ ಅನುರಣಿಸಿತು. ರಾವಣನ ಪತ್ನಿ ಮಂಡೋದರಿಯ ವಿಲಾಪವನ್ನು ಕೇಳಿದ ರಾಮ ರಾವಣನಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರವನ್ನು ಮಾಡಿ ಲಂಕೆಯನ್ನು ಪ್ರವೇಶಿಸಿದನು.
ಸಂತೋಷದಿಂದ ಬೀಗುತ್ತಿದ್ದ ಸೀತೆ ರಾಮನ ಜೊತೆಗೂಡಿದಳು. ಆದರೆ ಅವಳ ಸಂತೋಷ ತಾತ್ಕಾಲಿಕವಾಗಿತ್ತು. ತಲೆ ತಗ್ಗಿಸಿ ಅವಳನ್ನು ಬರಮಾಡಿಕೊಂಡ ರಾಮ, ರಾವಣನ ಮನೆಯಲ್ಲಿ ಅವಳು ಇದ್ದದ್ದರಿಂದ ತನ್ನ ಪತ್ನಿಯಾಗಲು ಅವಳು ತಕ್ಕವಳಾಗಿ ಉಳಿದಿಲ್ಲವೆಂದು ಹೇಳಿದ. ತನ್ನ ಪಾತಿವ್ರತ್ಯದ ಬಗ್ಗೆ ಅವನಿಗೆ ಭರವಸೆಯಿತ್ತಳು ಸೀತೆ. ಆದರು ರಾಮನ ಅನುಮಾನ ಮುಂದುವರೆದಿದ್ದರಿಂದ ಸೀತೆ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಿ ತನ್ನ ಚಿತೆಯನ್ನು ನಿರ್ಮಿಸಬೇಕೆಂದು ಹೇಳಿದಳು. ಎಲ್ಲ ಪ್ರೇಕ್ಷಕರ ಅಂತಃಕರಣವೂ ಸೀತೆಯ ಕಡೆಗಿದ್ದಿತು. ಸೀತೆ ಚಿತೆಯನ್ನೇರಿ ಕೆಲ ಕ್ಷಣಗಳಲ್ಲಿಯೇ ಅಗ್ನಿ ಆಕೆಯನ್ನು ತನ್ನ ಬಾಹುಗಳಲ್ಲಿ ಎತ್ತಿ ತಂದು ಬಿಟ್ಟನು. ಅಗ್ನಿಪರೀಕ್ಷೆಯಲ್ಲಿ ತನ್ನ ನಿರಪರಾಧವನ್ನು ತೋರಿಸಿದ ಸೀತೆಯನ್ನು ರಾಮ ಸ್ವಾಗತಿಸಿದನು. ರಾಮನ ನಡತೆಯನ್ನು ಸೀತೆ ಕ್ಷಮಿಸಿದಳು.
ಯುದ್ಧವನ್ನು ಗೆದ್ದು, ರಾವಣನನ್ನು ಸೋಲಿಸಿ, ಸೀತೆಯನ್ನು ಮರಳಿ ಪಡೆದು, ರಾಮ ವಿಜೃಂಭಣೆಯಿಂದ ಅಯೋಧ್ಯೆಗೆ ಮರಳಿ ಭರತ ಮತ್ತು ಅಯೋಧ್ಯೆಯ ಜನರ ಅಪಾರ ಸಂತೋಷಕ್ಕೆ ರಾಜ್ಯಭಾರವನ್ನು ವಹಿಸಿಕೊಂಡನು.
[ಬದಲಾಯಿಸಿ] ಸೀತಾ ಪರಿತ್ಯಾಗ
ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ,ಸಮೃದ್ಧಿಗಳು ನೆಲಸಿದ್ದವು. ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ,ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾಡತೊಡಗಿದರು. ತನ್ನ ಪ್ರಜೆಗಳನ್ನು ಸಂತೋಷಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು.
ಸೀತೆ ಸ್ವಲ್ಪಮಾತ್ರವೂ ಗೊಣಗದೆ ಕಾಡಿಗೆ ಹೊರಟಳು. ದು:ಖತಪ್ತಳಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ,ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ.
ಲವ,ಕುಶರು ಇಬ್ಬರು ಬೆಳೆದು ಇಪ್ಪತ್ತು ವರ್ಷದ ಯುವಕರಾಗಿದ್ದರು. ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು. ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳನ್ನೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ,ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮುೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ,ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮದಿಂದ ಕರೆದುಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಮೇಲಿರುವ ಕಳಂಕದಿಂದ ದೂರಾಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ.
ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ - ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿದು ನನ್ನನ್ನು ನಿನ್ನ ಬಳಿ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯನ್ನು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ.
[ಬದಲಾಯಿಸಿ] ರಾಮಾಯಣದ ನೀತಿಪಾಠ
ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ . ಜೀವನವು ಕ್ಷಣಭಂಗುರವಾಗಿದ್ದು ಭೋಗಲಾಲಸೆಯ ನೀತಿಯು ಅರ್ಥಹೀನವಾದದ್ದು . ಆದರೆ ಹಾಗೆಂದು ಯಾವದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು . ವೇದದಲ್ಲಿ ಉಕ್ತವಾದದ್ದೇ ಧರ್ಮ, ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ,ನಷ್ಟಗಳಿಗಾಗಿ ಅಲ್ಲ ಎಂಬುದು ಅವನ ಅಭಿಪ್ರಾಯ . ಇಂಥ ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವದು [೩] ಅಷ್ಟೇ ಅಲ್ಲದೆ , ಯಾವುದೇ ಮಾತು ಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತು ಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತು ಕೊಡುತ್ತದೆ .
ನಾರದ ಮುನಿಯು ಇಡೀ ರಾಮಾಯಣವನ್ನು ಸ್ವಲ್ಪದರಲ್ಲಿ ವಾಲ್ಮೀಕಿಗೆ ಹೇಳಿದ ಸಂಕ್ಷೇಪ ರಾಮಾಯಣವು ವಾಲ್ಮೀಕಿರಾಮಾಯಣದ ಮೊದಲ ಸರ್ಗವಾಗಿದೆ. ನಾರದನು ಆದರ್ಶಮನುಷ್ಯನ ೧೬ ಗುಣಗಳನ್ನು ಪಟ್ಟಿ ಮಾಡಿ ರಾಮನು ಈ ಎಲ್ಲ ೧೬ ಗುಣಗಳನ್ನು ಹೊಂದಿದ ಸಂಪೂರ್ಣ ಮಾನವ ಎಂದು ಹೇಳುತ್ತಾನೆ [೪] ರಾಮನೇ ಸ್ವತಃ ತಾನು ಮನುಷ್ಯಮಾತ್ರನೆಂದು ಹೇಳಿದರೂ , ಒಮ್ಮೆ ಕೂಡ ತಾನು ದೈವಾಂಶವುಳ್ಳವನೆಂದು ಹೇಳದಿದ್ದರೂ [೫],ಹಿಂದುಗಳು ಅವನನ್ನು ಆದರ್ಶವ್ಯಕ್ತಿಯೆಂದೂ ವಿಷ್ಣು ದೇವರ ಪ್ರಮುಖ ಅವತಾರಗಳಲ್ಲೊಬ್ಬ ಎಂದೂ ಪರಿಗಣಿಸುತ್ತಾರೆ .
ವಾಲ್ಮೀಕಿಯು ಅವನನ್ನು ತನ್ನ ಕಥೆಯಲ್ಲಿ ಒಬ್ಬ ಅತಿಮಾನವ ಎಂದು ಚಿತ್ರಿಸದೆ, ಎಲ್ಲ ಗುಣದೋಷಗಳಿಂದ ಕೂಡಿ, ನೈತಿಕ ಸಂದಿಗ್ಧಗಳನ್ನೆದುರಿಸಿ ಅವುಗಳನ್ನು ಧರ್ಮ( ಸರಿಯಾದ ಮಾರ್ಗ ) ವನ್ನು ಅನುಸರಿಸುವುದರಿಂದ ಗೆದ್ದ ಒಬ್ಬ ಸಹಜಮಾನವನನ್ನಾಗಿ ಚಿತ್ರಿಸಿದ್ದಾನೆ. ವಾಲ್ಮೀಕಿ ರಾಮಾಯಣದಲ್ಲಿ ಕಥಾನಾಯಕನ ಪರಿಶುದ್ಧ ಚಾರಿತ್ರ್ಯದ ಬಗ್ಗೆ ಸಂಶಯವನ್ನುಂಟುಮಾಡುವ ಅನೇಕ ಸಂದರ್ಭಗಳಿವೆ. ತನ್ನ ರಾಜ್ಯವನ್ನು ಮರಳಿ ಪಡೆಯಲು ಸುಗ್ರೀವನಿಗೆ ಸಹಾಯಮಾಡಲು ವಾಲಿಯನ್ನು ಮರದ ಮರೆಯಿಂದ ರಾಮನು ಕೊಲ್ಲುವದು ಯುದ್ಧದ ನಿಯಮಗಳಿಗೆ ವಿರೋಧವಾಗಿತ್ತು ಸೀತೆಯು ರಾವಣನ ಸೆರೆಯಿಂದ ಬಿಡುಗದೆ ಹೊಂದಿದಾಗ ಅಗ್ನಿಯನ್ನು ಪ್ರವೇಶಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧ ಮಾಡುವಂತೆ ರಾಮನು ಅವಳನ್ನು ಬಲವಂತಪಡಿಸುತ್ತಾನೆ. ನಂತರ ಶೂದ್ರ ಶಂಬೂಕನನ್ನು ಸಮಾಜದ ಕೆಳವರ್ಗದಲ್ಲಿದ್ದು ಯೋಗಿಗಳಂತೆ ತಪಸ್ಸನ್ನು ಮಾಡಿದ್ದಕ್ಕಾಗಿ ರಾಮನು ಕೊಲ್ಲುವನು. ಇವು ಮತ್ತು ಉಳಿದ ಅನೇಕ ಇಂಥ ರಾಮಾಯಣದಲ್ಲಿನ ಪ್ರಸಂಗಗಳು ಕಥಾನಾಯಕನಾದ ರಾಮನ ಮನುಷ್ಯ ಸಹಜ ಗುಣವನ್ನೆತ್ತಿ ತೋರಿಸಿ ಕಥೆಯ ಮೂಲನೀತಿಯಾಗಿರುವ 'ಮನುಷ್ಯನು ಸತ್ಯಮಾರ್ಗವನ್ನು ಅನುಸರಿಸಲು ಅತಿಮಾನವನಿರುವದು ಅವಶ್ಯವಿಲ್ಲ' ಎಂಬುದನ್ನು ಸಮರ್ಥಿಸುತ್ತವೆ.
[ಬದಲಾಯಿಸಿ] ಪಠ್ಯದ ಚರಿತ್ರೆ
ಸಾಂಪ್ರದಾಯಿಕ ನಂಬುಗೆಯಂತೆ ಈ ಕಾವ್ಯವು ಹಿಂದೂ ಕಾಲಗಣನೆಯ ನಾಲ್ಕು ಯುಗಗಳಲ್ಲೊಂದಾದ ತ್ರೇತಾಯುಗಕ್ಕೆ ಸೇರಿದ್ದು , ವಾಲ್ಮೀಕಿಯು ರಚಿಸಿದ್ದು . ವಾಲ್ಮೀಕಿಯೂ ಈ ಕಥೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಾನೆ.
ರಾಮಾಯಣದ ಭಾಷೆ ಪಾಣಿನಿಯ ಕಾಲಕ್ಕಿಂತಲೂ ಹಳೆಯದಾದ ಸಂಸ್ಕೃತ. ಮಹಾಭಾರತ ಮತ್ತು ರಾಮಾಯಣಗಳೆರಡರಲ್ಲೂ ಸಂಸ್ಕೃತದ ಈ ಪ್ರಭೇದ ಕಂಡುಬರುತ್ತದೆ. ರಾಮಾಯಣದ ಮೂಲ ಕೃತಿಯ ರಚನೆ ಕ್ರಿ.ಪೂ. ಐದನೆ ಶತಮಾನದಲ್ಲಿ ಆದದ್ದಿರಬಹುದು. ಅನೇಕ ಶತಮಾನಗಳ ಕಾಲ ಬಾಯಿಂದ ಬಾಯಿಗೆ, ಹಾಗೂ ಲಿಖಿತ ರೂಪದಲ್ಲೂ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಹೊಂದುತ್ತಾ, ಮಧ್ಯೆಮಧ್ಯೆ ಅನೇಕ ಮಾರ್ಪಾಟುಗಳನ್ನು ಹೊಂದುತ್ತ ಇಂದಿನ ರೂಪವನ್ನು ಪಡೆದಿದೆ. ಹೀಗಾಗಿ ರಾಮಾಯಣದ ರಚನಾಕಾಲವನ್ನು ಕೇವಲ ಭಾಷಾ ವಿಶ್ಲೇಷಣೆಯಿಂದ ಕಂಡುಹಿಡಿಯಲಾಗದು. ದೀರ್ಘವಾದ ಪ್ರಕ್ರಿಯೆಯ ಮೂಲಕ ಇಂದಿನ ರೂಪವನ್ನು ರಾಮಾಯಣ ಪಡೆದಿದ್ದು, ಈ ಪ್ರಕ್ರಿಯೆ ಸುಮಾರು ಕ್ರಿ.ಪೂ. ಐದನೆ ಶತಮಾನದಲ್ಲಿ ಆರಂಭಗೊಂಡು ಕ್ರಿ.ಶ. ನಾಲ್ಕನೆಯ ಶತಮಾನದ ಹೊತ್ತಿಗೆ ಪೂರ್ಣವಾಯಿತು ಎಂದು ಪರಿಗಣಿಸಲಾಗಿದೆ.
ರಾಮಾಯಣದ ಕಥೆಯ ಕಾಲ ಇನ್ನೂ ಹಳೆಯದಿರಬಹುದು. ರಾಮಾಯಣದಲ್ಲಿ ಬರುವ ಪಾತ್ರಗಳ ಹೆಸರುಗಳು - ರಾಮ, ಸೀತೆ, ದಶರಥ, ಜನಕ, ವಸಿಷ್ಠ, ವಿಶ್ವಾಮಿತ್ರ - ಈ ಎಲ್ಲ ಹೆಸರುಗಳೂ ವಾಲ್ಮೀಕಿ ರಾಮಾಯಣಕ್ಕಿಂತ ಹಳೆಯದಾದ ವೇದಬ್ರಾಹ್ಮಣಗಳಲ್ಲಿ ಕಂಡುಬರುತ್ತವೆ. [೬] ಆದರೆ ವೇದಗಳಲ್ಲೆಲ್ಲೂ ವಾಲ್ಮೀಕಿಯ ರಾಮಾಯಣದ ಕಥೆಯನ್ನು ಹೋಲುವ ಯಾವ ಕಥೆಯೂ ಕಂಡುಬರುವುದಿಲ್ಲ. [೭] ರಾಮಾಯಣದಲ್ಲಿ ಮುಖ್ಯ ಪಾತ್ರ ವಹಿಸುವ ಬ್ರಹ್ಮ ಮತ್ತು ವಿಷ್ಣು ವೇದೋಕ್ತ ದೇವತೆಗಳಲ್ಲ. ಮಹಾಭಾರತ-ರಾಮಾಯಣಗಳ ಮತ್ತು ಪುರಾಣಗಳ ರಚನಾನಂತರವೇ ಈ ದೇವರುಗಳ ಜನಪ್ರಿಯತೆ ಹೆಚ್ಚಿರುವುದು ಕಂಡುಬರುತ್ತದೆ.
ಸಾಮಾನ್ಯವಾಗಿ, ರಾಮಾಯಣದ ಎರಡನೆ ಕಾಂಡದಿಂದ ಆರನೆ ಕಾಂಡದವರೆಗಿನ ಭಾಗಗಳು ಈ ಕಾವ್ಯದ ಅತಿ ಪ್ರಾಚೀನ ಭಾಗಗಳೆಂದು ಪರಿಗಣಿಸಲಾಗುತ್ತದೆ. ಮೊದಲ ಕಾಂಡವಾದ ಬಾಲಕಾಂಡ ಮತ್ತು ಕೊನೆಯದಾದ ಉತ್ತರಕಾಂಡ ನಂತರ ಸೇರಿಸಲ್ಪಟ್ಟ ಭಾಗಗಳೆಂದು ಪರಿಗಣಿತವಾಗಿವೆ. [೮] ಬಾಲಕಾಂಡ ಮತ್ತು ಅಯೋಧ್ಯಾಕಾಂಡದ ಕರ್ತೃ ಅಥವಾ ಕರ್ತೃಗಳು ಗಂಗಾ ಜಲಾನಯನ ಪ್ರದೇಶ ಹಾಗೂ ಪ್ರಾಚೀನ ಭಾರತದ "ಹದಿನಾರು ಜನಪದ"ಗಳ ಕಾಲದಲ್ಲಿನ ಮಗಧ ಹಾಗೂ ಕೋಸಲ ಪ್ರದೇಶಗಳ ನಿಕಟ ಪರಿಚಯ ಪಡೆದಿದ್ದರೆನ್ನುವುದು ಕಂಡುಬರುತ್ತದೆ. ಇದಕ್ಕೆ ಕಾರಣ ರಾಮಾಯಣದ ಈ ಭಾಗಗಳಲ್ಲಿನ ರಾಜಕೀಯ ಹಾಗೂ ಭೌಗೋಳಿಕ ವರ್ಣನೆಗಳು "ಹದಿನಾರು ಜನಪದ"ಗಳ ಕಾಲದ ಸ್ಥಿತಿಗತಿಗಳನ್ನು ಬಿಂಬಿಸುತ್ತವೆ.
ಆದರೆ ರಾಮಾಯಣದ ಅರಣ್ಯಕಾಂಡವನ್ನು ಗಮನಿಸಿದರೆ, ರಾಕ್ಷಸರು, ವಿಚಿತ್ರ ಪ್ರಾಣಿಗಳು, ಮೊದಲಾದವುಗಳನ್ನೊಳಗೊಂಡ ಕಲ್ಪನಾಲೋಕದತ್ತ ವರ್ಣನೆಗಳು ಸರಿಯುತ್ತವೆ. ಮಧ್ಯ ಹಾಗೂ ದಕ್ಷಿಣ ಭಾರತದ ಭೌಗೋಳಿಕ ವರ್ಣನೆಗಳು ವಾಸ್ತವದಿಂದ ಸಾಕಷ್ಟು ದೂರವಿರುವುದು ಕಂಡುಬರುತ್ತದೆ. ಶ್ರೀಲಂಕಾ ದ್ವೀಪದ ಸರಿಯಾದ ಸ್ಥಳದ ಬಗ್ಗೆ ವಿವರಗಳು ಅಸ್ಪಷ್ಟವಾಗಿರುವುದು ಸಹ ಕಂಡುಬರುತ್ತದೆ. [೯] ಈ ಅಂಶಗಳ ಆಧಾರದ ಮೇಲೆ, ಚರಿತ್ರಜ್ಞ ಎಚ್.ಡಿ.ಸಂಕಾಲಿಯಾ ಅವರು ರಾಮಾಯಣದ ಕಾಲ ಸುಮಾರು ಕ್ರಿ.ಪೂ. ನಾಲ್ಕನೆಯ ಶತಮಾನ ಇದ್ದಿರಬಹುದೆಂದು ಪ್ರತಿಪಾದಿಸಿದ್ದಾರೆ. [೧೦] ಆದರೆ ಇನ್ನೊಬ್ಬ ಚರಿತ್ರಕಾರರಾದ ಎ.ಎಲ್.ಬಾಷಮ್ ಅವರು ರಾಮನು ಕ್ರಿ.ಪೂ. ೭ ನೆಯ ಅಥವಾ ೮ ನೆಯ ಶತಮಾನದಲ್ಲಿ ಇದ್ದಿರಬಹುದಾದ ಸಣ್ಣ ರಾಜ ಎಂದು ಅಭಿಪ್ರಾಯಪಟ್ಟಿದ್ದಾರೆ. [೧೧]
ಇನ್ನು ಕೆಲವರು ರಾಮಾಯಣದ ಕಥೆಯ ಕಾಲ ಕ್ರಿ.ಪೂ. ೬೦೦೦ ದಷ್ಟು ಹಳೆಯದಿರಬಹುದೆಂದು ಪ್ರತಿಪಾದಿಸಿದ್ದಾರೆ. [೧೨]
[ಬದಲಾಯಿಸಿ] ವಿಭಿನ್ನ ರೂಪಾಂತರಗಳು
.
ಅನೇಕ ಜಾನಪದ ಕಥೆಗಳಂತೆ, ರಾಮಾಯಣದ ಕಥೆಯ ವಿವಿಧ ರೂಪಾಂತರಗಳು ಅಸ್ತಿತ್ವದಲ್ಲಿವೆ. ಮುಖ್ಯವಾಗಿ, ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ರಾಮಾಯಣದ ಕಥೆ ದಕ್ಷಿಣ ಭಾರತ ಮತ್ತು ದಕ್ಷಿಣಪೂರ್ವ ಏಷ್ಯಾದಲ್ಲಿ ಪ್ರಚಲಿತವಾಗಿರುವ ರೂಪಾಂತರಕ್ಕಿಂತ ಕೆಲವು ಅಂಶಗಳಲ್ಲಿ ಭಿನ್ನವಾಗಿದೆ. ರಾಮಾಯಣದ ಕಥಾಸಂಪ್ರದಾಯ ಥೈಲೆಂಡ್, ಕಾಂಬೋಡಿಯ, ಮಲೇಷಿಯ, ಲಾಓಸ್, ವಿಯೆಟ್ನಾಮ್ ಮತ್ತು ಇಂಡೊನೇಷ್ಯಾ ದೇಶಗಳಲ್ಲೂ ಪ್ರಚಲಿತವಾಗಿದೆ.
ಮಲೇಷಿಯಾದ ಕೆಲವು ರೂಪಾಂತರಗಳಲ್ಲಿ ಲಕ್ಷ್ಮಣನಿಗೆ ರಾಮನ ಪಾತ್ರಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ರಾಮನ ಪಾತ್ರವನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ.
[ಬದಲಾಯಿಸಿ] ಭಾರತೀಯ ರೂಪಾಂತರಗಳು
ಭಾರತದಲ್ಲಿ ವಿವಿಧ ಕಾಲಗಳಲ್ಲಿ ಅನೇಕ ಬರಹಗಾರರು ಬರೆದ ರಾಮಾಯಣದ ರೂಪಾಂತರಗಳಿವೆ. ಈ ವಿವಿಧ ರೂಪಾಂತರಗಳು ಒಂದರಿಂದ ಇನ್ನೊಂದು ಸಾಕಷ್ಟು ಭಿನ್ನವಾಗಿಯೂ ಇವೆ. ೧೪-೧೫ ನೆಯ ಶತಮಾನಗಳಲ್ಲಿ, ಕುಮಾರ ವಾಲ್ಮೀಕಿ ಕನ್ನಡಲ್ಲಿ ತೊರವೆ ರಾಮಾಯಣ ಎಂಬ ರೂಪಾಂತರದ ಕರ್ತೃ. ಕನ್ನಡದ ಇತರ ಮುಖ್ಯ ರಾಮಾಯಣಗಳೆಂದರೆ ರಾಷ್ಟ್ರಕವಿ ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ "ಶ್ರೀ ರಾಮಾಯಣ ದರ್ಶನಂ" ಮತ್ತು ರಂಗನಾಥ ಶರ್ಮಾ ಅವರ "ಕನ್ನಡ ವಾಲ್ಮೀಕಿ ರಾಮಾಯಣ."
೧೨ ನೆಯ ಶತಮಾನದಲ್ಲಿ ತಮಿಳು ಕವಿ ಕಂಬ "ರಾಮಾವತಾರಮ್" ಅಥವಾ ಕಂಬರಾಮಾಯಣ ರಚಿಸಿದ. ಹಿಂದಿ ಭಾಷೆಯ ಪ್ರಸಿದ್ಧ ರಾಮಾಯಣ ೧೫೭೬ ರಲ್ಲಿ ತುಲಸೀದಾಸರು ರಚಿಸಿದ ಶ್ರೀ ರಾಮಚರಿತ ಮಾನಸ. ಇದಲ್ಲದೆ ಗುಜರಾತಿ ಕವಿ ಪ್ರೇಮಾನಂದರು ೧೭ ನೆಯ ಶತಮಾನದಲ್ಲಿ, ಬಂಗಾಲಿ ಕವಿ ಕೃತ್ತಿವಾಸರು ೧೪ ನೆಯ ಶತಮಾನದಲ್ಲಿ, ಒರಿಯಾ ಕವಿ ಬಲರಾಮದಾಸರು ೧೬ ನೆಯ ಶತಮಾನದಲ್ಲಿ, ಮರಾಠಿ ಕವಿ ಶ್ರೀಧರ ೧೮ ನೆಯ ಶತಮಾನದಲ್ಲಿ, ತೆಲುಗು ಕವಿ ರಂಗನಾಥರು ೧೫ ನೆಯ ಶತಮಾನದಲ್ಲಿ ರಾಮಾಯಣದ ಆವೃತ್ತಿಗಳನ್ನು ರಚಿಸಿದ್ದಾರೆ.
ರಾಮಾಯಣದ ಉಪ-ರೂಪಾಂತರಗಳಲ್ಲಿ ಒಂದು ರಾವಣನ ಕೇಡಿಗ ತಮ್ಮಂದಿರಾದ ಅಹಿ ರಾವಣ ಮತ್ತು ಮಹಿ ರಾವಣರನ್ನು ಕುರಿತದ್ದು. ಈ ಕಥೆಯಂತೆ ಅಹಿ-ಮಹಿ ರಾವಣರು ರಾಮ ಮತ್ತು ಲಕ್ಷ್ಮಣರನ್ನು ಕಾಳಿಗೆ ಬಲಿ ಕೊಡಲು ಹೊತ್ತೊಯ್ಯುತ್ತಾರೆ. ಈ ಕಥೆಯಲ್ಲಿ ಹನುಮಂತನ ಪಾತ್ರ ಬಹಳ ಮುಖ್ಯವಾಗಿದ್ದು ಅವನೇ ರಾಮ-ಲಕ್ಷ್ಮಣರನ್ನು ಕಾಪಾಡುತ್ತಾನೆ.
ಕೇರಳದ ಮಾಪಿಳ್ಳೆಗಳಲ್ಲಿ ಪ್ರಚಲಿತವಾಗಿರುವ ರಾಮಾಯಣದ ಒಂದು ರೂಪಾಂತರದ ಬಗ್ಗೆಯೂ ವರದಿಗಳಿವೆ. [೧೩]
"ಮಾಪಿಳ್ಳೆ ರಾಮಾಯಣ" ಎಂದು ಕರೆಯಲ್ಪಡುವ ಈ ರೂಪಾಂತರ ಮಾಪಿಳ್ಳೆಗಳ ಜಾನಪದ ಹಾಡುಗಳ ಗುಂಪಿನಲ್ಲಿ ಸೇರಿದೆ. ಮುಸಲ್ಮಾನ ಸಂಪ್ರದಾಯದಲ್ಲಿ ಸೇರಿರುವ ಈ ರೂಪಾಂತರದಲ್ಲಿ ರಾಮಾಯಣದ ನಾಯಕ ಒಬ್ಬ ಮುಸ್ಲಿಮ್ ಸುಲ್ತಾನ. ರಾಮನ ಹೆಸರನ್ನು "ಲಾಮನ್" ಎಂದು ಬದಲಾಯಿಸಿರುವುದನ್ನು ಬಿಟ್ಟರೆ ಬೇರೆಲ್ಲ ಪಾತ್ರಗಳೂ ರಾಮಾಯಣದಲ್ಲಿ ಇರುವಂತೆಯೇ ಇವೆ. ಮುಸ್ಲಿಮ್ ಸಾಮಾಜಿಕ ರೀತಿನೀತಿಗಳಿಗೆ ಹೊಂದಿಕೊಳ್ಳುವಂತೆ ಕಥೆಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಲಾಗಿದೆ.
[ಬದಲಾಯಿಸಿ] ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳು
ಏಷ್ಯಾದ ಇನ್ನೂ ಅನೇಕ ಸಂಸ್ಕೃತಿಗಳು ರಾಮಾಯಣವನ್ನು ಆಮದು ಪಡೆದಿದ್ದು, ಕೆಲವು ದೇಶಗಳ ರಾಷ್ಟ್ರೀಯ ಮಹಾಕಾವ್ಯಗಳು ರಾಮಾಯಣದಿಂದಲೇ ಸ್ಫೂರ್ತಿ ಪಡೆದಿವೆ. ಚೀನಾ ದೇಶದ ಮಹಾಕಾವ್ಯ "ಪಶ್ಚಿಮದತ್ತ ಪಯಣ" ದ ಕೆಲವು ಭಾಗಗಳು ರಾಮಾಯಣವನ್ನು ಆಧರಿಸಿದವು. ಪ್ರಮುಖವಾಗಿ ಈ ಕಾವ್ಯದ "ಸುನ್ ವುಕಾಂಗ್" ಪಾತ್ರ ಹನುಮಂತನನ್ನು ಆಧರಿಸಿದ ಪಾತ್ರ ಎಂದು ನಂಬಲಾಗಿದೆ. ಇಂಡೊನೇಷ್ಯಾದ ಜಾವಾ ಪ್ರದೇಶದಲ್ಲಿ ಒಂಬತ್ತನೆ ಶತಮಾನದ ಸುಮಾರಿನಲ್ಲಿ ರಾಮಾಯಣದ ಒಂದು ರೂಪಾಂತರವಾದ "ಕಾಕಾವಿನ್ ರಾಮಾಯಣ" ಜನ್ಮತಾಳಿತು. ಇದು ಸಂಸ್ಕೃತ ರಾಮಾಯಣವನ್ನು ಹೆಚ್ಚು ಬದಲಿಸದೆ ಮಾಡಿದ ಭಾಷಾಂತರವಾಗಿದೆ. ಲಾಓಸ್ ದೇಶದ ಕಾವ್ಯ "ಫ್ರಾ ಲಕ್ ಫ್ರಾ ಲಾಮ್" ರಾಮಾಯಣದ ರೂಪಾಂತರ; ಇದರ ಹೆಸರಿನಲ್ಲಿರುವ "ಲಕ್" ಮತ್ತು "ಲಾಮ್" ಲಕ್ಷ್ಮಣ ಮತ್ತು ರಾಮರ ಹೆಸರಿನ ಲಾಓ ರೂಪಾಂತರಗಳು. ಇದರಲ್ಲಿ ರಾಮನ ಜೀವನವನ್ನು ಬುದ್ಧನ ಹಿಂದಿನ ಅವತಾರಗಳಲ್ಲಿ ಒಂದೆಂದು ಚಿತ್ರಿಸಲಾಗಿದೆ. ಮಲೇಷ್ಯಾದ "ಹಿಕಾಯತ್ ಸೆರಿ ರಾಮ" ಕಾವ್ಯದಲ್ಲಿ ದಶರಥ ಪ್ರವಾದಿ ಆದಮನ ಮೊಮ್ಮಗ ಎಂದು ಚಿತ್ರಿಸಲಾಗಿದೆಯಲ್ಲದೆ, ರಾವಣ ಬ್ರಹ್ಮನಿಂದ ವರ ಪಡೆಯುವುದರ ಬದಲು ಅಲ್ಲಾನಿಂದ ವರ ಪಡೆಯುತ್ತಾನೆ. [೧೪]
ಥೈಲೆಂಡಿನ ಕಾವ್ಯವಾದ "ರಾಮಕಿಯೆನ್" ಸಹ ರಾಮಾಯಣವನ್ನು ಆಧರಿಸಿದೆ. ಇದರಲ್ಲಿ ಸೀತೆಯನ್ನು ರಾವಣ ಮತ್ತು ಮಂಡೋದರಿಯರ ಮಗಳೆಂದು ಚಿತ್ರಿಸಲಾಗಿದೆ. ಜ್ಯೋತಿಷಿಯಾದ ವಿಭೀಷಣನು ಸೀತೆಯ ಜಾತಕವನ್ನು ನೋಡಿ ಅಪಶಕುನವನ್ನು ಮುನ್ನುಡಿಯುತ್ತಾನೆ. ಹಾಗಾಗಿ ರಾವಣ ಅವಳನ್ನು ನೀರಿಗೆ ಎಸೆಯಿಸುತ್ತಾನೆ, ಮತ್ತು ನಂತರ ಜನಕ ಸೀತೆಯನ್ನು ಪಡೆಯುತ್ತಾನೆ. ಮುಖ್ಯ ಕಥೆ ರಾಮಾಯಣದ ಕಥೆಯಂತಿದ್ದರೂ ಸಾಮಾಜಿಕ ಸಂಪ್ರದಾಯಗಳನ್ನು ಥಾಯಿ ಸಮಾಜದ ಸಂಪ್ರದಾಯಗಳಿಗೆ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಹನುಮಂತನ ಪಾತ್ರ ಬಹಳ ಮುಖ್ಯವಾಗಿದೆ. ಈ ಕಾವ್ಯದ ವರ್ಣಚಿತ್ರಗಳು ಬ್ಯಾ೦ಗ್ಕಾಕ್ ನಲ್ಲಿರುವ "ವಾತ್ ಫ್ರಾ ಕಯೆವ್" ದೇವಸ್ಥಾನದಲ್ಲಿ ಕಂಡುಬರುತ್ತವೆ.
ಇತರ ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳಲ್ಲಿ ಬಾಲಿಯ "ರಾಮಕವಚ", ಫಿಲಿಪ್ಪೀನ್ಸ್ ನ "ಮರಡಿಯ ಲಾವಣ", ಕಾಂಬೋಡಿಯದ "ರೀಮ್ಕರ್" ಮತ್ತು ಮ್ಯಾನ್ಮಾರ್ ನ "ಯಾಮ ಜಾತ್ದವ್" ಗಳನ್ನು ಹೆಸರಿಸಬಹುದು.
[ಬದಲಾಯಿಸಿ] ವರ್ತಮಾನದಲ್ಲಿ ರಾಮಾಯಣ
ಕನ್ನಡದ ರಾಷ್ಟ್ರಕವಿಯಾಗಿದ್ದ ಕುವೆಂಪು ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚಿಸಿದ್ದಾರೆ. ತೆಲುಗು ಕವಿಯಾದ ವಿಶ್ವನಾಥ ಸತ್ಯನಾರಾಯಣ ಎಂಬುವವರು ರಾಮಾಯಣ ಕಲ್ಪವೃಕ್ಷಮು ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಇಬ್ಬರು ಕವಿಗಳಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಅಶೋಕ್ ಬ್ಯಾಂಕರ್ ಎಂಬ ಆಂಗ್ಲ ಲೇಖಕರು ರಾಮಾಯಣವನ್ನು ಆಧರಿಸಿ ಆರು ಸರಣಿ ಕಾದಂಬರಿಗಳನ್ನು ಹೊರತಂದಿದ್ದಾರೆ.
ಕಂಚೀಪುರಂನ ಗೇಟಿ ರೈಲ್ವೇ ಥಿಯೇಟರ್ ಕಂಪನಿಯು ದ್ರವಿಡರ ಸ್ವಾಭಿಮಾನವನ್ನು ಪುನರ್ಸ್ಥಾಪಿಸುವ ಉದ್ದೇಶದಿಂದ ಈ ಕಾವ್ಯದ ಪರಿಷ್ಕೃತ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ.ರಾವಣನನ್ನು ವಿದ್ವಾಂಸನೆಂದೂ , ರಾಜನೀತಿಜ್ಞನೆಂದೂ, ಸೀತೆ ಅವನಿಗೆ ಮರುಳಾದಳೆಂದೂ , ರಾಮನು ನೀತಿನಿಯಮ, ನಯನಾಜೂಕುಗಳಿಲ್ಲದ ಲಂಪಟ ರಾಜಕುಮಾರನೆಂದೂ , ಕುಡಿದು ಉನ್ಮತ್ತಸ್ಥಿತಿಯಲ್ಲಿ ಭಾರೀ ಮಾರಣಹೋಮಕ್ಕೆ ಆಜ್ನೆ ನೀಡಿದನೆಂದೂ ಚಿತ್ರಿಸುವ ರಾಮಾಯಣದ ಈ ಆವೃತ್ತಿಗಳು ಸಾಂಪ್ರದಾಯಿಕ ಪ್ರಸ್ತುತಿಗಳಿಂದ ಬಹಳಷ್ಟು ದೂರ ಇವೆ. ಈ ರೀತಿಯ ಪಾತ್ರಚಿತ್ರಣಗಳು ತನ್ನ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಪುನರ್ ಸ್ಥಾಪಿಸುವ ದ್ರಾವಿಡ ಚಳುವಳಿಯ ಹೆಚ್ಚುತ್ತಿರುವ ಗುಪ್ತಪ್ರಯತ್ನದ ಅಂಗಗಳಾಗಿವೆ .
[ಬದಲಾಯಿಸಿ] ರಾಮಾಯಣದ ಗುರುತುಗಳು
ಹಂಪೆಯ ಹತ್ತಿರ ಇರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳ ನಡುವೆ ಸುಗ್ರೀವನ ಗುಹೆ ಎಂದು ಹೆಸರಾದ ಒಂದು ಗುಹೆಯಿದೆ. ಈ ಗುಹೆಯಲ್ಲಿ ಬಣ್ಣಬಣ್ಣದ ಗುರುತುಗಳಿವೆ. ಈ ಸ್ಥಳವು ಸುಂದರಕಾಂಡದಲ್ಲಿನ ಕಿಷ್ಕಿಂಧೆಯ ವರ್ಣನೆಯಂತೆ ಇದೆ .ರಾಮನು ಹನುಮಂತನನ್ನು ಇಲ್ಲಿ ಭೇಟಿಯಾದನೆಂದು ಹೇಳುತ್ತಾರೆ. ಈ ಸ್ಥಳದಲ್ಲೇ ಸುಪ್ರಸಿದ್ಧ ಹಜಾರರಾಮನ(ಸಾವಿರ 'ರಾಮ'ರ) ದೇವಾಲಯವಿದೆ .
[ಬದಲಾಯಿಸಿ] ಈ ಪುಟಗಳನ್ನೂ ನೋಡಿ
[ಬದಲಾಯಿಸಿ] ಉಲ್ಲೇಖಗಳು
- Milner Rabb, Kate, National Epics, 1896 - See eText Project Gutenburg
- Raghunathan, N. (Trans), Srimad Valmiki Ramayanam, Vighneswara Publishing House, Madras (1981)
- A different Song - Article from "The Hindu" August 12, 2005 - [1]
- Dr. Gauri Mahulikar Effect Of Ramayana On Various Cultures And Civilisations, Ramayan Institute EFFECTOFRAMAYANAONVARIOUSCULTURESANDCIVILISATIONS.pdf -
- Goldman, Robert P., The Ramayana of Valmiki: An Epic of Ancient India Princeton University Press, 1999 ISBN 0-691-01485-X
- S. S. N. Murthy, A note on the Ramayana, Jawaharlal Nehru University, New Delhi [2]
[ಬದಲಾಯಿಸಿ] ಅಡಿ ಟಿಪ್ಪಣಿ
- ↑ Robert P. Goldman, The Ramayana of Valmiki: An Epic of Ancient India, pp 5
- ↑ Raghunathan, N. (trans.), Srimad Valmiki Ramayana
- ↑ ರಘುನಾಥನ್, ಎನ್. (ಅನುವಾದ), ಶ್ರೀಮದ್ ವಾಲ್ಮೀಕಿ ರಾಮಾಯಣಂ
- ↑ ೧೬ ಗುಣಗಳು ಯಾವುವೆಂದರೆ ೧. ಗುಣವಾನ್ - ನೀತಿವಂತ ೨ ವೀರ್ಯವಾನ್- ಶೂರ ೩. ಧರ್ಮಜ್ಞ - ಧರ್ಮವನ್ನು ತಿಳಿದವನು ೪. ಕೃತಜ್ಞ್ನ- saviour, ೫. ಸತ್ಯವಾಕ್ಯ – ಸತ್ಯವನ್ನು ನುಡಿಯುವವನು ೬. ಧೃಡವೃತ – self confident, ೭. ಚರಿತ್ರವಾನ್ – ಒಳ್ಳೆಯ ನದತೆಯುಳ್ಳವನು, ೮. ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವನು ೯. ವಿದ್ವಾನ್ - ಎಲ್ಲ ವಿದ್ಯೆಗಳನ್ನು ಬಲ್ಲವನು ೧೦. ಸಮರ್ಥ – ಸಮರ್ಥನು, ೧೧. ಸದೈಕ ಪ್ರಿಯದರ್ಶನ – ನೋಡಲು ಕಣ್ಣುಗಳಿಗೆ ಸದಾ ಸುಖಕರನು ೧೨. ಆತ್ಮವಂತ – ಧೈರ್ಯಸ್ಥ, ೧೩. ಜಿತಕ್ರೋಧ –ಕೋಪವನ್ನು ಗೆದ್ದವನು , ೧೪. ದ್ಯುತಿಮಾನ್ – ಕಾಂತಿಯುಳ್ಳವನು, ೧೫. ಅನಸೂಯಕ – ಅಸೂಯೆ ಇಲ್ಲದವನು, ೧೬. ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಶಸ್ಯ ಸಂಯುಗೆ' - ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವನು.
- ↑ ಆತ್ಮಾನಂ ಮಾನುಷಂ ಮನ್ಯೆ
- ↑ In the Vedas Sita means furrow relating to a goddess of agricuture. - S.S.S.N. Murty, A note on the Ramayana
- ↑ Goldman, Robert P., The Ramayana of Valmiki: An Epic of Ancient India pp 24
- ↑ Goldman, Robert P., The Ramayana of Valmiki: An Epic of Ancient India pp 15-16
- ↑ Goldman, Robert P., The Ramayana of Valmiki: An Epic of Ancient India pp 28
- ↑ See Sankalia, H.D., Ramayana: Myth or Reality, New Delhi, 1963
- ↑ Basham, A.L., The Wonder that was India, London, 1956, pp303
- ↑ Goldman, Robert P., The Ramayana of Valmiki: An Epic of Ancient India p. 14
- ↑ See A different song, The Hindu, Aug 12, 2005
- ↑ See Effect Of Ramayana On Various Cultures And Civilisations
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಮೂಲ ಪಠ್ಯ
- रामायण (Devanagari version on Wikisource)
- ಇಂಗ್ಲಿಷ್ ಭಾಷಾಂತರಗಳು ಟೆಂಪ್ಲೇಟು:En icon
- ರಾಲ್ಫ್ ಗ್ರಿಫಿತ್ ಅವರಿಂದ ಭಾಷಾಂತರಿಸಲ್ಪಟ್ಟ ವಾಲ್ಮೀಕಿ ರಾಮಾಯಣ (೧೮೭೦-೧೮೭೪)
- ಅರ್ಥಸಹಿತ ವಾಲ್ಮೀಕಿ ರಾಮಾಯಣ ಟೆಂಪ್ಲೇಟು:Sa icon/ಟೆಂಪ್ಲೇಟು:En icon
- ಆನ್ಲೈನ್ ಮಾಹಿತಿ
- ಗುಜರಾತಿ ಭಾಷಾಂತರದೊಂದಿಗೆ ತುಲಸಿ ರಾಮಾಯಣದ ಪಠ್ಯ
- ರಾಮಾಯಣದ ಬಗೆಗೆ ಕ್ಷಿಪ್ರ ಮಾಹಿತಿ
- ಆರ್.ಸಿ.ಭಟ್ ಅವರಿಂದ ಸರಳೀಕೃತ ರಾಮಾಯಣ ಮತ್ತು ಮಹಾಭಾರತ (೧೮೯೯)
- ಆನ್ಲೈನ್ ರಾಮಾಯಣ (ನೋಂದಣಿ ಅಗತ್ಯ)
- ನಾಸಾ ಸಂಸ್ಥೆ ತೆಗೆದಿರುವ ಚಿತ್ರ(ಇದನ್ನ ರಾಮಾಯಣ ಕಾಲದ ಸೇತುವೆ ಇರಬಹುದು ಎಂದು ಶಂಕಿಸಲಾಗಿದೆ)
- ರಾಮಾಯಣ ಆಧಾರಿತ ಕೃತಿಗಳು
- Illustrated Ramayana contains paintings, sculptures, and other Indian art inspired by Ramayana.
- The Ramayana reliefs at Prambanan
- Marathi lyrical representation of Ramayana by G D Madgulkar and Sudhir Phadke
- Sita Sings the Blues - clips of a 21st century animated portrayal of the Ramayana from Sita's perspective
- ಸಂಶೋಧನಾ ಲೇಖನಗಳು
- ವಿವಿಧ ಸಂಸ್ಕೃತಿಗಳ ಮೇಲೆ ರಾಮಾಯಣದ ಪ್ರಭಾವ - (ಪಿಡಿಫ್ ರೂಪದಲ್ಲಿದೆ.)
- ವರ್ಗೀಕರಣಗೊಳ್ಳದ ಕೆಲವು ಅಂತರ್ಜಾಲ ತಾಣಗಳು
- Ramayana.com
- Weekly podcast on Vedic Chanting, Mantras, Vedic Mythology and stories from the Puranas
- http://india.krishna.org/Articles/2002/10/002.html
- http://www.atributetohinduism.com/Hindu_Scriptures.htm
- Ramayana
- Ramayana Monkey Chant Video clip
- Clay Sanskrit Library publishes classical Indian literature, including the Mahabharata and Ramayana, with facing-page text and translation. Also offers searchable corpus and downloadable materials.
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | ![]() |
---|---|
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |